ಮದ್ಯ ಮಾರಾಟ, ಪರವಾನಗಿಗೆ ಸಂಬಂಧಿಸಿ ರಾಜ್ಯ ಸರಕಾರದ ನೀತಿ ಖಂಡಿಸಿ, ಮದ್ಯ ಮಾರಾಟ ಮಾಡುವವರ ಹಿತ ರಕ್ಷಣೆಗೆ ಆಗ್ರಹಿಸಿ ರಾಜ್ಯ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್, ಬೆಳಗಾವಿ ಜಿಲ್ಲಾ ಮದ್ಯ ವರ್ತಕರ ಸಂಘದ ಮುಖಂಡರು, ಕಾರ್ಯಕರ್ತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ಸರಕಾರ ಮದ್ಯ ಮಾರಾಟಕ್ಕೆ ಸಂಬಂಧಿಸಿ 2008ರಿಂದ ಹಲವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇದರಿಂದ ಮದ್ಯ ಮಾರಾಟಗಾರರಿಗೆ ತೊಂದರೆಯಾಗಿದೆ. ಲಾಭಾಂಶವನ್ನು ಶೇ.20ರಿಂದ ಶೇ.10ಕ್ಕೆ ಇಳಿಸಲಾಗಿದೆ. ಆನ್‍ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ.
ಹೆದ್ದಾರಿಯಲ್ಲಿ ಮದ್ಯ ಮಾರಾಟಕ್ಕೆ ಕೆಲವು ಕಠಿಣ ಷರತ್ತುಗಳೊಂದಿಗೆ ಪರವಾನಗಿ ನೀಡಲಾಗಿದೆ. ಇದರಿಂದ ಮದ್ಯ ಮಾರಾಟಗಾರರಿಗೆ ಅನಾನುಕೂಲವಾಗಿದ್ದು, ಮದ್ಯ ಮಾರಾಟ ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಾಗುತ್ತಿದೆ.
ಸರಕಾರ ಮದ್ಯ ಮಾರಾಟಗಾರರಿಗೆ ಅನುಕೂಲ ಮಾಡಿಕೊಡಲು ನಿಯಮಗಳಲ್ಲಿ ಬದಲಾವಣೆ ಮಾಡಬೇಕು. ಆನ್‍ಲೈನ್‍ನಲ್ಲಿ ಮದ್ಯ ಮಾರಾಟ ಬಂದ್ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್, ಬೆಳಗಾವಿ ಜಿಲ್ಲಾ ಮದ್ಯವರ್ತಕರ ಸಂಘದ ಮುಖಂಡರು, ಕಾರ್ಯಕರ್ತರು ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಹುಕ್ಕೇರಿ ತಾಲೂಕು ಮದ್ಯ ವರ್ತಕರ ಸಂಘದ ಅಧ್ಯಕ್ಷ, ಜಿಲ್ಲಾ ಮದ್ಯವರ್ತಕರ ಸಂಘದ ನಿರ್ದೇಶಕ ಶಂಕರ ಹೆಗ್ಗಡೆ ಮಾತನಾಡಿ, ರಾಜ್ಯದಲ್ಲಿ 11 ಸಾವಿರ ಪರವಾನಗಿ ಹೊಂದಿದ ಮದ್ಯ ಮಾರಾಟ ಅಂಗಡಿಗಳಿವೆ. ಆನ್‍ಲೈನ್‍ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಪರವಾನಗಿ ಹೊಂದಿದ ಮದ್ಯ ಮಾರಾಟಗಾರರಿಗೆ ಅನಾನುಕೂಲ ಮಾಡಲಾಗಿದೆ.ಕೋವಿಡ್ ಸಂದರ್ಭದಲ್ಲೂ ಸಹ 50 ದಿನ ಅಂಗಡಿ ಬಂದ್ ಮಾಡಿ ನಾವೆಲ್ಲ ಸರಕಾರಕ್ಕೆ ಸಹಕಾರ ನೀಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಮದ್ಯ ಮಾರಾಟಗಾರರಿಗೆ ಸಾಕಷ್ಟು ಸಹಾಯ ಮಾಡಲಾಗಿದೆ.
ಆದರೆ ಕರ್ನಾಟಕ ಸರಕಾರ ಭರವಸೆ ನೀಡಿದಂತೆ ಸರಕಾರ ಮದ್ಯ ಮಾರಾಟಗಾರರಿಗೆ ಯಾವುದೇ ನೆರವು ನೀಡಿಲ್ಲ. ಮದ್ಯ ಮಾರಾಟದಲ್ಲಿ ಲಾಭಾಂಶವನ್ನು ಶೇ.20ರಿಂದ ಶೇ.10ಕ್ಕೆ ಇಳಿಸಲಾಗಿದೆ. ಈಗಾಗಲೇ ನಮ್ಮ ಸಮಸ್ಯೆಗಳ ಬಗ್ಗೆ ನಾಲ್ಕು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರಕಾರ ಮದ್ಯ ವರ್ತಕರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಮದ್ಯವರ್ತಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.