Belagavi

ಮಾಳಮಾರುತಿ ಸಿಪಿಐ ವರ್ತನೆ ವಿರೋಧಿಸಿ ಸಂಚಾರ ತಡೆದು ವಕೀಲರ ಪ್ರತಿಭಟನೆ: ಡಿಸಿ ನೇತೃತ್ವದಲ್ಲಿ ವಿವಾದ ಇತ್ಯರ್ಥ

Share

ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದ ವಕೀಲರೊಂದಿಗೆ ಸಿಪಿಐ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬೆಳಗಾವಿ ವಕೀಲರ ಸಂಘದ ಮುಖಂಡರು, ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದರು. ಕೋರ್ಟ್ ಬಳಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ರಾಜೀ ಸಂಧಾನದ ಮೂಲಕ ವಕೀಲರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ಕಕ್ಷಿದಾರರೊಬ್ಬರ ಪರ ದೂರು ದಾಖಲಿಸಲು ಠಾಣೆಗೆ ತೆರಳಿದ್ದ ವಕೀಲರ ಸಂಘದ ಸದಸ್ಯ ಚೇತನ ಈರಣ್ಣವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಸಿಪಿಐ ಸುನೀಲ ಪಾಟೀಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಬೆಳಗಾವಿ ವಕೀಲರ ಸಂಘದ ಮುಖಂಡರು, ಸದಸ್ಯರು ದಿಢೀರ್ ಸಂಚಾರ ತಡೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಕೋರ್ಟ್ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು. ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಕೀಲರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಕೀಲರ ಸಂಘದ ಮುಖಂಡರೊಬ್ಬರು ಮಾತನಾಡಿ, ಕಕ್ಷಿದಾರರೊಬ್ಬರ ಪರ ದೂರು ಕೊಡಲು ಹೋದ ವಕೀಲರ ಸಂಘದ ಸದಸ್ಯ ಚೇತನ ಈರಣ್ಣವರ ಜೊತೆ ಸಿಪಿಐ ಸುನೀಲ ಪಾಟೀಲ ಅಸಭ್ಯವಾಗಿ ವರ್ತಿಸಿದ್ದಾರೆ. ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ. ಏನು ಹರಕೋತಿಯೋ ಹರಕೋ ಎಂದು ಅವಾಚ್ಯವಾಗಿ ಮಾತನಾಡಿದ್ದಾರೆ. ವಕೀಲರನ್ನು ಗೌರವಿಸದ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಪಿಐ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಇನ್ನು ವಕೀಲರ ಸಂಘದ ಸದಸ್ಯ ಚೇತನ ಈರಣ್ಣವರ ಮಾತನಾಡಿ, ಅವಾಚ್ಯ ಶಬ್ದ ಬಳಸಿ ನಿಂದಿಸಿದ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕು. ವಕೀಲರಿಗೂ ಮರ್ಯಾದೆ ಇದೆ. ವಕೀಲರಿಗೆ ಮರ್ಯಾದೆ ನೀಡಿ ಮಾತನಾಡದ ಸಿಪಿಐ ಬೆಳಗಾವಿಗೆ ಬೇಡವೇ ಬೇಡ. ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಕೊನೆಗೆ ಮಾರ್ಕೇಟ್ ಠಾಣೆ ಎಸಿಪಿ ಸದಾಶಿವ ಕಟ್ಟೀಮನಿ ಸಂಧಾನಕ್ಕೆ ಯತ್ನಿಸಿದ ಪ್ರಯತ್ನವೂ ಕೈಗೂಡಲಿಲ್ಲ.

ನಂತರ ಡಿಸಿಪಿ ಡಾ.ವಿಕ್ರಮ ಆಮ್ಟೆ ಮತ್ತು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ, ಮಾಳಮಾರುತಿ ಠಾಣೆ ಸಿಪಿಐ ಸುನೀಲ ಪಾಟೀಲ ಅವರನ್ನು ಕರೆಸಿ ಸಂಧಾನಕ್ಕೆ ಪ್ರಯತ್ನಿಸಿದರು. ಸಂಚಾರ ತಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಪ್ರತಿಭಟನೆ ಹಿಂದಕ್ಕೆ ಪಡೆಯಬೇಕು ಎಂದು ವಕೀಲರಿಗೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮನವಿ ಮಾಡಿದರು.

ಕೊನೆಗೆ ಸಿಪಿಐ ಸುನೀಲ ಪಾಟೀಲ ಮಾತನಾಡಿ, ನಾನು ಯಾವ ತಪ್ಪನ್ನೂ ಮಾಡಿಲ್ಲ. ಠಾಣೆಗೆ ಬರಬೇಡಿ ಎಂದೂ ಹೇಳಿಲ್ಲ. ವಕೀಲರಿಗೆ ತಪ್ಪು ಕಲ್ಪನೆಯಾಗಿದ್ದರೆ ವಿಷಾದ ವ್ಯಕ್ತಪಡಿಸಲು ತಾನು ಹಿಂಜರಿಯುವುದಿಲ್ಲ ಎಂದು ಹೇಳಿದ ನಂತರ ವಕೀಲರು ಪ್ರತಿಭಟನೆ ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.

 

Tags:

error: Content is protected !!