Events

ಬೈಲಹೊಂಗಲದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕೆಲಸ..ಯಾವಾಗ ಆರಂಭಿಸುತ್ತಿರಿ..ಸರ್ಕಾರಕ್ಕೆ ಶಾಸಕ ಮಹಾಂತೇಶ ಕೌಜಲಗಿ ಪ್ರಶ್ನೆ

Share

ಬೈಲಹೊಂಗಲ ತಾಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿಯನ್ನು ಯಾವಾಗ ಆರಂಭಿಸುತ್ತಿರಿ ಎಂದು ಶಾಸಕ ಮಹಾಂತೇಶ ಕೌಜಲಗಿ ಅವರು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರನ್ನು ಪ್ರಶ್ನಿಸಿದರು.

ಗುರುವಾರ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಈ ಸಂಬಂಧ ಮಾತನಾಡಿದ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು ನಮ್ಮ ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಅವಶ್ಯ ಇರುವುದು ಸರ್ಕಾರದ ವರದಿಯಲ್ಲಿ ಬಂದಿದೆ ಎಂದು ಹೇಳುತ್ತಿದ್ದಾರೆ. ಈಗಾಗಲೇ 2021/22ನೇ ಸಾಲಿನ ಎನ್‍ಎಚ್‍ಎಮ್ ಕ್ರಿಯಾಯೋಜನೆಯಲ್ಲಿ ಸೇರ್ಪಡೆ ಮಾಡಿದ್ದೇವೆ ಎಂದು ಹೇಳುತ್ತಿರುವ ಸರ್ಕಾರಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಆದರೆ ಈ ಕ್ರಿಯಾ ಯೋಜನೆಗೆ ಯಾವಾಗ ಅನುಮೋದನೆ ನೀಡುತ್ತಿರಿ, ಯಾವಾಗ ಕಾಮಗಾರಿ ಆರಂಭಿಸುತ್ತಿರಿ ಎಂದು ಆರೋಗ್ಯ ಸಚಿವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಷ್ಟ್ರೀಯ ಆರೋಗ್ಯ ಮಿಶನ್ ಯೋಜನೆಯಡಿ ಬೈಲಹೊಂಗಲದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದು, ಬೈಲಹೊಂಗಲದಲ್ಲಿ ಈ ಆಸ್ಪತ್ರೆ ಅವಶ್ಯವಿದೆ ಎಂದು ವರದಿ ಬಂದಿರುವ ಹಿನ್ನೆಲೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮತಿ ಸಿಗುವ ನಿರೀಕ್ಷೆಯಿದ್ದು, 2021-22ರಲ್ಲಿಯೇ ಆಸ್ಪತ್ರೆ ನಿರ್ಮಾಣದ ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.

ನಂತರ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರೆ ಮಾತನಾಡಿ ನನ್ನ ಕ್ಷೇತ್ರಕ್ಕೆ ಮಂಜೂರಾಗಿದ್ದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ರದ್ಧಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಆಸ್ಪತ್ರೆ ನಿರ್ಮಿಸಿ, ಆದರೆ ಆಸ್ಪತ್ರೆಗಳನ್ನು ನಗರ ಮಧ್ಯದಲ್ಲಿಯೇ ನಿರ್ಮಿಸಿದ್ರೆ ಜನರಿಗೆ ಒಳ್ಳೆಯದು ಆಗುತ್ತದೆ. ಸಿಟಿಯಿಂದ ಎರಡು ಕಿ.ಮಿ. ದೂರ ನಿರ್ಮಿಸಿದ್ರೆ ಜನರಿಗೆ ಸಾಕಷ್ಟು ತೊಂದರೆ ಆಗುತ್ತದೆ. ಅದೇ ರೀತಿ ಕಾಲೇಜುಗಳನ್ನು ಕೂಡ ಸಿಟಿಯಿಂದ ದೂರದಲ್ಲಿ ಕಟ್ಟಬಾರದು, ಸಿಟಿಯ ಮಧ್ಯದಲ್ಲಿಯೇ ಜಾಗ ಖರೀದಿ ಮಾಡಿ ಕಟ್ಟಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಾಲೂಕು ಆಸ್ಪತ್ರೆ ಪಕ್ಕದಲ್ಲಿಯೇ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ತಾಲೂಕಾಸ್ಪತ್ರೆ ಆವರಣದಲ್ಲಿ ಜಾಗದ ಕೊರತೆ ಇದ್ದಿರುವ ಕ್ಷೇತ್ರಗಳಲ್ಲಿ ದೂರದ ಪ್ರದೇಶಗಳಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಒಟ್ಟಾರೆ ಬೈಲಹೊಂಗಲ ತಾಲೂಕಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಸಂಬಂಧ ಶಾಸಕ ಮಹಾಂತೇಶ ಕೌಜಲಗಿ ಕೇಳಿದ್ದ ಪ್ರಶ್ನೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟ ಉತ್ತರ ನೀಡಿದ್ದು. 2021-22ರಲ್ಲಿಯೇ ಆಸ್ಪತ್ರೆ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದು. ಈ ಭಾಗದ ಜನತೆಯಲ್ಲಿ ಸಂತಸ ತಂದಿದೆ.

Tags:

error: Content is protected !!