ಬೆಳಗಾವಿ ಮಚ್ಛೆ ಪ್ರದೇಶದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಸೇನಾ ಭರ್ತಿ ಮೆಗಾ ರ್ಯಾಲಿ ನಡೆದಿದ್ದು, ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಂಡ ಸಾವಿರಾರು ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಸೇನಾ ಭರ್ತಿ ರ್ಯಾಲಿ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ, ಸೇನೆಯ ಅಧಿಕಾರಿಗಳು ಬೆಳಗ್ಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಕೋವಿಡ್ 19 ಲಕ್ಷಣ ಇಲ್ಲದಿರುವ ಬಗ್ಗೆ ವೈದ್ಯರಿಂದ ಪ್ರಮಾಣ ಪತ್ರ ಇದ್ದರೂ ಸಾಕು ಎಂದು ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿ ಸ್ಪಷ್ಪಪಡಿಸಿದರು.

ಬೆಳಗಾವಿಯಲ್ಲಿ ನಡೆದಿರುವ ಸೇನಾ ಭರ್ತಿ ಮೆಗಾ ರ್ಯಾಲಿಯಲ್ಲಿ ಬೆಳಗಾವಿ, ರಾಯಚೂರು, ಯಾದಗಿರಿ, ಬೀದರ್, ಕೊಪ್ಪಳ, ಕಲಬುರಗಿ ಜಿಲ್ಲೆಯಿಂದ ಸಾವಿರಾರು ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ. ಡಿಸೆಂಬರ್ 5ರಿಂದ ಜನವರಿ 18ರೊಳಗೆ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡ 62,217 ಅಭ್ಯರ್ಥಿಗಳ ಪೈಕಿ ಪ್ರತಿದಿನ ಅಂದಾಜು 4800 ಅಭ್ಯರ್ಥಿಗಳ ದೈಹಿಕ ಸಾಮಥ್ರ್ಯ, ವೈದ್ಯಕೀಯ, ಶೈಕ್ಷಣಿಕ ಸೇರಿ ಮತ್ತಿತರ ಅರ್ಹತೆಗಳ ಪರೀಕ್ಷೆ ನಡೆಯಲಿದೆ. ಫೆಬ್ರುವರಿ 15ರವರೆಗೂ ಪ್ರತಿದಿನ ನಿಗದಿತ ಅಭ್ಯರ್ಥಿಗಳ ಪರೀಕ್ಷೆ ನಡೆಸಲಾಗುವುದು. ಒಟ್ಟು 5,500 ಅಭ್ಯರ್ಥಿಗಳನ್ನು ಭರ್ತಿ ಮಾಡುವ ಗುರಿಯೊಂದಿಗೆ ಅಭ್ಯರ್ಥಿಗಳ ಪರೀಕ್ಷೆ ನಡೆಯಲಿದೆ.
ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮಾತನಾಡಿ, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಸೈನ್ಯಕ್ಕೆ ಸೇರಲು ಅಪೇಕ್ಷಿಸಿ ಅಭ್ಯರ್ಥಿಗಳು ಬೆಳಗಾವಿಗೆ ಬಂದಿದ್ದಾರೆ. ಈ ಜಿಲ್ಲೆಯಿಂದ ಇಂತಿಷ್ಟು ಅಭ್ಯರ್ಥಿಗಳು ಎಂದು ಯಾವುದೇ ಸಂಖ್ಯೆ ನಿಗದಿಪಡಿಸದೇ, ಅರ್ಹರು ಯಾವುದೇ ಜಿಲ್ಲೆಯಾಗಿದ್ದರೂ ಅವರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಲು ಅಧಿಕಾರಿಗಳು ಪರೀಕ್ಷೆ ನಡೆಸುತ್ತಿದ್ದಾರೆ. ಅಭ್ಯರ್ಥಿಗಳ ವಾಸ್ತವ್ಯಕ್ಕೂ ಪೀರನವಾಡಿಯ ಮೂರು ಕಲ್ಯಾಣ ಮಂಟಪಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲಿಯೇ ಅಂದಾಜು 32,000 ಮಾಜಿ ಸೈನಿಕರಿದ್ದಾರೆ. ಇದು ಹೆಮ್ಮೆಯ ವಿಷಯ. ಸೈನ್ಯ ಸೇರಲು, ಪೊಲೀಸ್ ಇಲಾಖೆ ಸೇರಲು ನಮ್ಮ ಯುವಕರ ಉತ್ಸಾಹ ನೋಡಿ ಖುಷಿಯಾಗಿದೆ ಎಂದರು.
ಇನ್ನು ಕೋವಿಡ್ 19 ಪರೀಕ್ಷೆ ಅಥವಾ ತಪಾಸಣಾ ವರದಿಯ ಅಗತ್ಯವಿಲ್ಲ. ಲಕ್ಷಣ ಇಲ್ಲದಿರುವ ಬಗ್ಗೆ ಯಾವುದಾದರೂ ವೈದ್ಯರಿಂದ ಪ್ರಮಾಣ ಪತ್ರ ಇದ್ದರೆ ಸಾಕು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಇನ್ನು ಸೈನ್ಯದ ಅಧಿಕಾರಿ ಎ.ಎಸ್.ವಲಾಂಬೆ ಮಾತನಾಡಿ, 2019ರಲ್ಲಿ ಕೊಪ್ಪಳದಲ್ಲಿ ಮೆಗಾ ರ್ಯಾಲಿ ಮಾಡಿದ್ದೆವು. ಈಗ ಬೆಳಗಾವಿಯಲ್ಲಿ ಮೆಗಾ ರ್ಯಾಲಿ ಹಮ್ಮಿಕೊಂಡಿದ್ದಾರೆ. ಕರ್ನಾಟಕದ ಬೆಳಗಾವಿ ಪ್ರದೇಶದಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಹೆಚ್ಚಿದೆ. ಅವರೆಲ್ಲ ಅತ್ಯುತ್ತಮ ಸೈನಿಕರಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಈಗ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 2 ವರ್ಷ ತರಬೇತಿ ನೀಡಲಾಗುವುದು. ನಂತರ ಸೈನ್ಯದಲ್ಲಿ ಅವರು ಸೇರ್ಪಡೆಯಾಗಲಿದ್ದಾರೆ, ಅವರನ್ನು ಯಾವುದೇ ರೆಜಿಮೆಂಟಿಗೆ ಸೇರ್ಪಡೆ ಮಾಡಬಹುದು. ಅದು ರ್ಯಾಂಡಮ್ ಆಯ್ಕೆಯಾಗಿರುತ್ತದೆ ಎಂದರು.
ಈ ವೇಳೆ ಸೈನ್ಯಕ್ಕೆ ಆಯ್ಕೆಯಾದ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ತಳಕಲ್ ಗ್ರಾಮದ ಯುವಕ ಶಿವಪ್ಪ ಮಾತನಾಡಿ, ದೇಶಸೇವೆ ಮಾಡಬೇಕು ಎಂಬ ನನ್ನ ಬಹುದಿನಗಳ ಕನಸು ನನಸಾಗುತ್ತಿದೆ. ಇದು ಸಂತೋಷ ನೀಡಿದೆ. ರೈತ ಕುಟುಂಬದ ನನ್ನ ಅಪ್ಪ, ಅಮ್ಮನಿಗೆ ನಾನೊಬ್ಬನೇ ಮಗ. ನಾಲ್ಕು ಜನ ಅಕ್ಕ ತಂಗಿಯರು ಇದ್ದಾರೆ. ರೈತರಾಗಿರುವ ನನ್ನ ತಂದೆಗೆ ಈಗ 72 ವರ್ಷ ವಯಸ್ಸು. ಒಬ್ಬನೇ ಮಗನಾದರೂ ಅವರೆಂದೂ ನನ್ನ ದೇಶ ಸೇವೆ ಕನಸಿಗೆ ಅಡ್ಡಿಯಾಗಿಲ್ಲ. ಒಂದು ವರ್ಷದಿಂದ ತಳಕಲ್‍ನಲ್ಲಿರುವ ನಮ್ಮ ಹೊಲದಿಂದ ಕೊಪ್ಪಳದವರೆಗೆ ಓಟದ ಅಭ್ಯಾಸ ಮಾಡಿದ್ದೆ. ಈ ಅಭ್ಯಾಸದಿಂದ ಇಲ್ಲಿ ಓಟದ ಸ್ಪರ್ಧೆ ಎದುರಿಸುವುದು ಸುಲಭವಾಯಿತು. ಅಭ್ಯಾಸವಿಲ್ಲದೇ, ವಿಶ್ರಾಂತಿಯಿಲ್ಲದೇ ಏನಾದರೂ ಸಾಧನೆ ಮಾಡುತ್ತೇನೆ ಎಂದು ಹೊರಟರೆ ಆಗದು. ಅರ್ಹತೆ ನೋಡಿ ಸೈನ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ದೃಢ ನಿರ್ಧಾರ, ಗುರಿ ಸೇರಲು ಅಭ್ಯಾಸ, ಸಮಾಧಾನದ ಜೀವನ ಇದ್ದರೆ ಗುರಿ ತಲುಪುವುದು ಕಷ್ಟವಲ್ಲ ಎಂದರು.
ಒಟ್ಟಿನಲ್ಲಿ ಸೈನ್ಯ ಭರ್ತಿ ಮೆಗಾ ರ್ಯಾಲಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯುವಕರು ಸೈನ್ಯ ಸೇರಲು ಉತ್ಸುಕರಾಗಿ ಬೆಳಗಾವಿಗೆ ಬಂದಿದ್ದಾರೆ. ಸೈನ್ಯಕ್ಕೆ ಅರ್ಹತೆ ಪಡೆಯಲು ಕಸರತ್ತು ನಡೆಸಿದ್ದಾರೆ.