ದಿವ್ಯಾಂಗ ಮತದಾರರು, ೮೦ ವರ್ಷ ಮೇಲ್ಪಟ್ಟವರು, ಕೋವಿಡ್ ಸೋಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ಸೌಲಭ್ಯ ನೀಡಲಾಗುತ್ತದೆ. ಈ ಸೌಲಭ್ಯ ಮುಂದೆ ನಡೆಯಲಿರುವ ಉಪಚುನಾವಣೆಯಲ್ಲೂ ಮುಂದುವರಿಯುತ್ತದೆ. ಅದೇ ರೀತಿ ಚುನಾವಣಾ ಅಕ್ರಮ ತಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ.ಸಂಜೀವಕುಮಾರ್ ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ.ಸಂಜೀವಕುಮಾರ್ ಅವರು ಈ ಬಗ್ಗೆ ಮಾತನಾಡಿದರು. ಶಿರಾ, ಆರ್.ಆರ್.ನಗರ ಉಪಚುನಾವಣೆಯಲ್ಲಿ ಕೋವಿಡ್ ಹಿನ್ನೆಲೆ ವಿಶೇಷ ಸೌಲಭ್ಯ ನೀಡಲಾಗಿತ್ತು. ಆ ಸೌಲಭ್ಯ ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಮುಂದುವರಿಯುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಇರುವ ದಿವ್ಯಾಂಗರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇನ್ನು ಬೆಳಗಾವಿ ಲೋಕಸಭೆ ಉಪಚುನಾವಣೆ ಯಾವಾಗ ಘೋಷಣೆ ಆಗುತ್ತೆ ಅಂತಾ ನಾವು ಹೇಳಕ್ಕಾಗಲ್ಲ ಎಂದ ಡಾ.ಸಂಜೀವಕುಮಾರ್ ಅವರು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 38,57,982 ಮತದಾರರು ಇದ್ದಾರೆ. ಇದರಲ್ಲಿ 19,52,160 ಪುರುಷ, 19,00,822 ಮಹಿಳಾ ಮತದಾರರು ಇದ್ದಾರೆ. ಇನ್ನು 19,836 ಸೇವಾ ಮತದಾರರು ಇದರಲ್ಲಿ 354 ಮಹಿಳಾ ಮತದಾರರಿದ್ದಾರೆ. ಹೀಗಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ರೆ ಈಗಲೂ ಹೆಸರು ನೋಂದಾಯಿಸಬಹುದು. ಆದ್ರೆ ಉಪಚುನಾವಣೆ ಘೋಷಣೆ ಆದ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆಗೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಡಿಸಿ ಮಹಾಂತೇಶ ಹಿರೇಮಠ, ಪೊಲೀಸ್ ಕಮಿಷನರ್ ಡಾ.ಕೆ.ತ್ಯಾಗರಾಜನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.