ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲೆ ಮೀರಾ ರಾಘವೇಂದ್ರ ಅವರು ಪ್ರೊ .ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣ ಗಂಭೀರ ತಿರುವು ಪಡೆದಿದೆ. ಡಾ.ಎಂ.ಎಂ.ಕಲ್ಬುರ್ಗಿ, ಗೌರಿ ಲಂಕೇಶ್ ರೀತಿ ಭಗವಾನ್ ಹತ್ಯೆಗೆ ಸಂಚು ರೂಪಿಸಿದ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಬೆಂಗಳೂರು ಪೊಲೀಸರು ಐಪಿಸಿ ಸೆಕ್ಷನ್ 506, 341, 34 ಹಾಗೂ 504ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರೊ .ಭಗವಾನ್ ಅವರ ಮುಖಕ್ಕೆ ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲೆ ಮೀರಾ ರಾಘವೇಂದ್ರ ಮಸಿ ಬಳಿದ ವೇಳೆಯಲ್ಲಿ ಬೆದರಿಕೆ ಹಾಕಿರುವ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಮೈಸೂರು ತಲುಪುವಷ್ಟರಲ್ಲಿ ನನ್ನ ಸಂಘಟನೆ ಹುಡುಗರು ಡಾ.ಎಂ.ಎಂ.ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದಂತೆ ನಿನ್ನನ್ನೂ ಹತ್ಯೆ ಮಾಡುತ್ತಾರೆ ಎಂದು ಹೇಳಿದರೆನ್ನಲಾದ ಕುರಿತು ಪೊಲೀಸರಿಗೆ ನೀಡಿದ ಲಿಖಿತ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 506, 341, 34 ಹಾಗೂ 504ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆ ಕೈಗೆತ್ತಿಕೊಳ್ಳುವುದು ಬಾಕಿ ಇದೆ. ಇದಕ್ಕಾಗಿ ವಕೀಲೆ ಮೀರಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಪ್ರೊ .ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಅವರನ್ನು ಕೂಡಲೇ ಬಂಧಿಸಬೇಕು ಎಂದು ದಲಿತ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಮೀರಾ ಮಾಡಿರೋದು ಸರಿಯಲ್ಲ, ಈ ಕೂಡಲೇ ಪೊಲೀಸರು ಮೀರಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಅಂತ ಆಗ್ರಹಿಸಿದ್ದಾರೆ.
ಒಂದು ವೇಳೆ ಪ್ರೊ. ಭಗವಾನ್ ತಪ್ಪು ಮಾಡಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂವಿಧಾನ ಅವಕಾಶ ಕಲ್ಪಿಸಿದೆ, ಹೀಗಿದ್ದರೂ ಮೀರಾ ಮಸಿ ಬಳಿದ ರೀತಿ ಸರಿಯಲ್ಲ ಅಂತ ಕಿಡಿಕಾರಿದ್ದಾರೆ.
ಈ ನಡುವೆ ಮೀರಾ ರಾಘವೇಂದ್ರ ಅವರ ನಡವಳಿಕೆ ವಿರುದ್ಧ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಕಿಡಿಕಾರಿದ್ದಾರೆ. ಮೀರಾ ರಾಘವೇಂದ್ರ ಬೆಂಗಳೂರು ವಕೀಲರ ಸಂಘದ ಸದಸ್ಯರಾಗಿಲ್ಲ. ಅವರು ಮಾಡಿರುವ ಕೆಲಸ ವಕೀಲರ ಹೆಸರಿಗೆ ಕಳಂಕ ತರುವಂಥದು ಎಂದು ವಕೀಲರ ಪರವಾಗಿ ಅವರು ಹೇಳಿಕೆ ನೀಡಿದ್ದಾರೆ.