ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋಗಿದ್ದ ವಕೀಲರೊಂದಿಗೆ ಸಿಪಿಐ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬೆಳಗಾವಿ ವಕೀಲರ ಸಂಘದ ಮುಖಂಡರು, ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದರು. ಕೋರ್ಟ್ ಬಳಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಕಕ್ಷಿದಾರರೊಬ್ಬರ ಪರ ದೂರು ದಾಖಲಿಸಲು ಠಾಣೆಗೆ ತೆರಳಿದ್ದ ವಕೀಲರ ಸಂಘದ ಸದಸ್ಯ ಚೇತನ ಈರಣ್ಣವರ ಜೊತೆ ಅಸಭ್ಯವಾಗಿ ವರ್ತಿಸಿದರು. ಅಲ್ಲಿದ್ದ ಸಿಪಿಐ ಸುನೀಲ ಪಾಟೀಲ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿ ಬೆಳಗಾವಿ ವಕೀಲರ ಸಂಘದ ಮುಖಂಡರು, ಸದಸ್ಯರು ದಿಢೀರ್ ಪ್ರತಿಭಟನೆಗಿಳಿಸಿದರು. ಸಂಚಾರ ತಡೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧಿಕ್ಕಾರದ ಘೋಷಣೆ ಕೂಗಿದರು.
ವಕೀಲರ ಸಂಘದ ಮುಖಂಡರೊಬ್ಬರು ಮಾತನಾಡಿ, ಕಕ್ಷಿದಾರರೊಬ್ಬರ ಪರ ದೂರು ಕೊಡಲು ಹೋದ ವಕೀಲರ ಸಂಘದ ಸದಸ್ಯ ಚೇತನ ಈರಣ್ಣವರ ಜೊತೆ ಸಿಪಿಐ ಸುನೀಲ ಪಾಟೀಲ ಅಸಭ್ಯವಾಗಿ ವರ್ತಿಸಿದ್ದಾರೆ.
ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ. ಏನು ಹರಕೋತಿಯೋ ಹರಕೋ ಎಂದು ಅವಾಚ್ಯವಾಗಿ ಮಾತನಾಡಿದ್ದಾರೆ. ವಕೀಲರನ್ನು ಗೌರವಿಸದ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕುರಿತು ಜಿಲ್ಲಾಧಿಕಾರಿ ಅವರಿಗೂ ದೂರು ನೀಡಿದ್ದು, ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಸಿಪಿಐ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ವಕೀಲರ ಸಂಘದ ಸದಸ್ಯ ಚೇತನ ಈರಣ್ಣವರ ಮಾತನಾಡಿ, ಅವಾಚ್ಯ ಶಬ್ದ ಬಳಸಿ ನಿಂದಿಸಿದ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕು. ವಕೀಲರಿಗೂ ಮರ್ಯಾದೆ ಇದೆ. ವಕೀಲರಿಗೆ ಮರ್ಯಾದೆ ನೀಡಿ ಮಾತನಾಡದ ಸಿಪಿಐ ಬೆಳಗಾವಿಗೆ ಬೇಡವೇ ಬೇಡ. ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.