ಕೆ.ಪ್ರತಾಪಚಂದ್ರ ಶೆಟ್ಟಿ ಅವರ ರಾಜೀನಾಮೆಯಿಂದ ತೆರವಾಗಿರುವ ಸಭಾಪತಿ ಸ್ಥಾನಕ್ಕೆ ಜೆಡಿಎಸ್ ಎಂಎಲ್‍ಸಿ ಬಸವರಾಜ ಹೊರಟ್ಟಿ ಹಾಗೂ ಕಾಂಗ್ರೆಸ್ ಎಂಎಲ್‍ಸಿ ನಸೀರ್ ಅಹ್ಮದ್ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್‍ನ ಹಿರಿಯ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸೋಮವಾರ ಬೆಳಿಗ್ಗೆ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ವಿಧಾನ ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಎಂ.ಟಿ.ಬಿ. ನಾಗರಾಜ್, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಜೆಡಿಎಸ್ ಸದಸ್ಯರಾದ ಅಪ್ಪಾಜಿಗೌಡ, ಎಚ್.ಎಂ.ರಮೇಶ್‍ಗೌಡ ಮತ್ತಿತರರು ಬಸವರಾಜ್ ಹೊರಟ್ಟಿಗೆ ಸಾಥ್ ನೀಡಿದ್ರು.
ಅದೇ ರೀತಿ ಇತ್ತ ಕಾಂಗ್ರೆಸ್ ಪಕ್ಷವೂ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಎಂಎಲ್‍ಸಿ ನಸೀರ್ ಅಹ್ಮದ್ ಅವರೂ ಕೂಡ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಶಾಸಕ ಜಮೀರ್ ಅಹ್ಮದ್, ಕಾಂಗ್ರೆಸ್ ನಾಯಕ ಬಿಕೆ ಹರಿ ಪ್ರಸಾದ್ ಸೇರಿದಂತೆ ಹಲವು ಕೈ ನಾಯಕರು ಉಪಸ್ಥಿತರಿದ್ದರು.
ವಿಧಾನಪರಿಷತ್‍ನ ಸಭಾಪತಿ ಸ್ಥಾನಕ್ಕೆ ನಾಳೆ ಮಂಗಳವಾರ ಚುನಾವಣೆ ನಡೆಯಲಿದ್ದು, ಸೋಮವಾರ ಮಧ್ಯಾಹ್ನ 1 ಗಂಟೆಯವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಹೀಗಾಗಿ ಇಂದು ಇಬ್ಬರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಒಟ್ಟಾರೆ ವಿಧಾನಪರಿಷತ್‍ನಲ್ಲಿ ಉಪಸಭಾಪತಿ ಸ್ಥಾನವನ್ನು ಜೆಡಿಎಸ್ ಬಿಜೆಪಿಗೆ ಬಿಟ್ಟು ಕೊಟ್ಟಿರುವ ಹಿನ್ನೆಲೆ ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ಬಿಟ್ಟು ಕೊಡಲು ಬಿಜೆಪಿ ನಿರ್ಧರಿಸಿದ್ದು. ನಾಳೆ ಅಂತಿಮ ಫಲಿತಾಂಶ ಹೊರ ಬೀಳಲಿದೆ.