ವಿಧಾನ ಪರಿಷತ್ ಕಲಾಪದಲ್ಲಿ ಕಾಗದ ಪತ್ರ ಎಸೆದು ದುರ್ವರ್ತನೆ ತೋರಿದ ಆರೋಪದ ಮೇಲೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರನ್ನು ಅಮಾನತುಗೊಳಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ತಿನಲ್ಲಿ ಗುರುವಾರ ಹಿಡಿದ ಪಟ್ಟು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಕೋಲಾಹಲ ಸೃಷ್ಟಿಸಿತು. ಕೊನೆಗೆ ಉಪ ಸಭಾಪತಿ ಪ್ರಾಣೇಶ್ ಸದನವನ್ನು 10 ನಿಮಿಷ ಮುಂದೂಡಿದರು.
ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಕೇಳಿದ ಪ್ರಶ್ನೆ ಕೋಲಾಹಲಕ್ಕೆ ಕಾರಣವಾಯಿತು. ಮಂಡ್ಯ ಜಿಲ್ಲೆ ನೀರಾವರಿ ಯೋಜನೆಗಳನ್ನು ತಡೆ ಹಿಡಿದಿರುವ ಕುರಿತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉತ್ತರಿಸಿದರು. ಅನುದಾನ ಲಭ್ಯತೆ ಆಧಾರದ ಮೇಲೆ ಯೋಜನೆ ಅನುಷ್ಠಾನ ಕೈಗೆತ್ತಿಕೊಳ್ಳಲಾಗುವುದು. ಒಂದು ವಾರದಲ್ಲಿ ಎಲ್ಲ ವಿವರ ಒದಗಿಸಿಕೊಡಲಾಗುತ್ತದೆ ಎಂದರು.
ಗೃಹ ಸಚಿವ ಬೊಮ್ಮಾಯಿ ಉತ್ತರಕ್ಕೆ ಸದಸ್ಯ ಮರಿತಿಬ್ಬೇಗೌಡ ಅಸಮಧಾನ ವ್ಯಕ್ತಪಡಿಸಿ, ಉತ್ತರ ವಿವರ ಇರುವ ಕಾಗದವನ್ನು ಸದನದಲ್ಲಿ ತೂರಿ ಆಕ್ರೋಶ ವ್ಯಕ್ತಪಡಿಸಿದರು. ಮರಿತಿಬ್ಬೇಗೌಡರ ಈ ವರ್ತನೆಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು, ಮರಿತಿಬ್ಬೇಗೌಡರ ನಡೆಯನ್ನು ಖಂಡಿಸಿದರು. ಮರಿತಿಬ್ಬೇಗೌಡ ವರ್ತನೆಗೆ ಕೆರಳಿದ ಬೊಮ್ಮಾಯಿ, ಅದೆಲ್ಲಾ ಕಾಲ ಹೋಗಿದೆ, ಈಗ ಅದೆಲ್ಲಾ ನಡೆಯಲ್ಲ ಎಂದು ಏರು ದನಿಯಲ್ಲಿ ತಿರುಗೇಟು ನೀಡಿದರು. ಇದಕ್ಕೆ ಪ್ರತಿಯಾಗಿ ಮರಿತಿಬ್ಬೇಗೌಡ ಕೂಡ ನಾನು ಹೆದರಲ್ಲ ಎಂದು ಟಾಂಗ್ ನೀಡಿದರು.
ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, ಪ್ರಶ್ನೆ ಕೇಳಲು, ಪ್ರತಿಕ್ರಿಯೆ ನೀಡಲು ರೀತಿ ನೀತಿ ಇದೆ, ಅಶಿಸ್ತು ತೋರಿ ಪೇಪರ್ ಎಸೆದಿದ್ದಾರೆ, ಸದನದಲ್ಲಿ ಹೇಗಿರಬೇಕು ಎಂದು ತಿಳಿಸುವ ಸಮಿತಿ ಅಧ್ಯಕ್ಷರಾಗಿದ್ದವರೇ ಈಗ ಅಶಿಸ್ತು ತೋರಿದ್ದಾರೆ ಅವರನ್ನು ಸದನದಿಂದ, ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಇದನ್ನು ಬಿಜೆಪಿ ಸದಸ್ಯರು ಮೇಜುಕುಟ್ಟಿ ಸ್ವಾಗತಿಸಿದರು.
ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಸಮಾಧಾನಪಡಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ಮರಿತಿಬ್ಬೇಗೌಡರ ವರ್ತನೆ ಸಹಿಸಲು ಸಾಧ್ಯವಿಲ್ಲ, ಸದನದಿಂದ ಅಮಾನತು ಮಾಡಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಇದಕ್ಕೆ ಸಚಿವ ಮಾಧುಸ್ವಾಮಿ ಸಾಥ್ ನೀಡಿದರು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಮುಂದುವರಿದಾಗ ಉಪ ಸಭಾಪತಿ ಪ್ರಾಣೇಶ್ ಸದನವನ್ನು ಕೆಲಹೊತ್ತು ಮುಂದೂಡಿದರು.