ದೇಶದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವಿದೇಶದ ಸೆಲೆಬ್ರೆಟಿಗಳು ಬೆಂಬಲಿಸಿರುವುದಕ್ಕೆ ಬಿಜೆಪಿ ವಿರೋಧಿಸುತ್ತಿರುವ ವಿಚಾರಕ್ಕೆ ತಿರುಗೇಟು ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಮೆರಿಕಾಗೆ ಹೋಗಿ ಪ್ರಧಾನಿ ಮೋದಿ ಅವರೇ ಟ್ರಂಪ್ ಪರವಾಗಿ ಪ್ರಚಾರ ಮಾಡಿ ಬಂದಿದ್ದರು. ಬೇರೆ ದೇಶಕ್ಕೆ ಇವರು ಯಾಕೆ ಹೋಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸತೀಶ ಜಾರಕಿಹೊಳಿ ಅವರು ಬೇರೆ ದೇಶಗಳಲ್ಲಿ ಅನ್ಯಾಯವಾದಾಗ ನಾವು ಕೂಡ ಧ್ವನಿ ಎತ್ತಿದ್ದೇವೆ. ಶ್ರೀಲಂಕಾದಲ್ಲಿ ಅನ್ಯಾಯವಾದಾಗ ನಮ್ಮ ಸೈನಿಕರು ಹೋಗಿದ್ದರು. ಬಾಂಗ್ಲಾ ದೇಶವನ್ನು ನಮ್ಮ ಇಂದಿರಾ ಗಾಂಧಿ ಅವರೇ ಪ್ರತ್ಯೇಕ ದೇಶ ಮಾಡಿದ್ದರು. ಆದರೆ ಅಮೆರಿಕಾಗೆ ಹೋಗಿ ಪ್ರಧಾನಿ ಮೋದಿ ಟ್ರಂಪ್ ಪರವಾಗಿ ಯಾಕೆ ಪ್ರಚಾರ ಮಾಡಬೇಕಿತ್ತು. ಅದು ಬೇರೆ ದೇಶ ಅಲ್ಲವೇ ಎಂದು ಕಿಡಿಕಾರಿದರು.
ರೈತರ ಹೋರಾಟ ಕಾಂಗ್ರೆಸ್ ಪ್ರಾಯೋಜಿತ ಹೋರಾಟ ಎಂಬ ಆರೋಪಕ್ಕೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ಬಿಜೆಪಿಯವರಿಗೆ ಹೇಳಲು ಒಂದು ನೆಪ ಅಷ್ಟೇ, ನಮಗೂ ಅದಕ್ಕೂ ಸಂಬಂಧ ಇಲ್ಲ. ರೈತರ ಹೋರಾಟಕ್ಕೆ ನಾವು ಬೆಂಬಲ ನೀಡಿದ್ದೇವೆ ಅಷ್ಟೇ ಎಂದರು. ಇನ್ನು ದೆಹಲಿಯಲ್ಲಿ ಜನವರಿ 26ರಂದು ನಡೆದ ಹಿಂಸಾಚಾರ ನೂರಕ್ಕೆ ನೂರು ಬಿಜೆಪಿಯವರು ಕುಮ್ಮಕ್ಕಿನಿಂದಲೇ ಹಿಂಸಾಚಾರ ಆಗಿದೆ. ವಾಟ್ಸಪ್‍ನಲ್ಲಿ ಪ್ರಧಾನಿ ಮೋದಿ ಜೊತೆ ಆಕ್ಟರ್ ಫೋಟೋ ಇರೋದು ಬಂದಿದೆ. ಅವರೇ ಜನರನ್ನು ಕರೆದುಕೊಂಡು ಹೋಗಿ ಮಾಡಿದ್ದು. ಹೋರಾಟದ ದಿಕ್ಕು ತಪ್ಪಿಸಲು, ಅಪಪ್ರಚಾರ ಮಾಡಲು ಈ ರೀತಿ ಕೃತ್ಯ ಮಾಡಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಇನ್ನು ರೈತರ ಹೋರಾಟದ ವಿರೋಧವಾಗಿ ಭಾರತರತ್ನ, ಪದ್ಮವಿಭೂಷಣ ಪ್ರಶಸ್ತಿ ಪಡೆದವರಿಗೆ ಒತ್ತಡ ಹಾಕುವ ಮೂಲಕ ಟ್ವೀಟ್ ಹಾಗೂ ಹೇಳಿಕೆ ಕೊಡಿಸುತ್ತಿದ್ದಾರೆ. ದೇಶ, ರೈತರಿಗಿಂತ ಪ್ರಶಸ್ತಿ ಏನೂ ದೊಡ್ಡದಲ್ಲ. ಅವರು ಪ್ರಶಸ್ತಿಗಳನ್ನು ವಾಪಸ್ಸು ಕೊಟ್ಟು ರೈತರ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಲೋಕಸಭೆ ಚುನಾವಣೆ ಸಂಬಂಧ ಮಾತನಾಡಿದ ಸತೀಶ ಜಾರಕಿಹೊಳಿ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ. ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ವಿಧಾನಸಭಾ ಕ್ಷೇತ್ರವಾರು ಭೇಟಿ ನೀಡುತ್ತಿದ್ದೇವೆ. ನಮ್ಮ ಪಾಡಿಗೆ ನಾವು ನಿರಂತರವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ನಮ್ಮ ಸೈನ್ಯ ಮೊದಲಿನಿಂದ ಗಟ್ಟಿಯಾಗಿದೆ. ನಾವು ಬಿಜೆಪಿಯವರ ಹಾಗೆ ವಾಟ್ಸಪ್‍ನಲ್ಲಿ ಮಾಡೋದಿಲ್ಲ. ಇನ್ನು ಮೂರನಾಲ್ಕು ವರ್ಷದಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದು ಹೇಳಿದರು.
ಕುರುಬ ಸಮುದಾಯದ ಮೀಸಲಾತಿ ಹೋರಾಟವನ್ನು ಸಚಿವ ಈಶ್ವರಪ್ಪನವರೇ ನೇತೃತ್ವ ವಹಿಸಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ಈ ಸಂಬಂಧ ಅವರೇ ಉತ್ತರ ಕೊಡಬೇಕು. ಪೆನ್ನು, ಹಾಳೆ ಅವರ ಕೈಯಲ್ಲಿಯೇ ಇದೆ, ಹೀಗಾಗಿ ನಾವೇನು ಉತ್ತರ ಕೊಡುವುದು ಎಂದರು. ಯಾರ್ಯಾರಿಗೆ ನ್ಯಾಯಸಮ್ಮತವಾಗಿ ಮೀಸಲಾತಿ ಸಿಗಬೇಕೋ ಅವರಿಗೆ ಸಿಗಲೇಬೇಕು ಎಂದು ಪಂಚಮಸಾಲಿ, ಕುರುಬ ಸಮುದಾಯದ ಮೀಸಲಾತಿ ಹೋರಾಟದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.
: ಒಟ್ಟಾರೆ ಹಲವು ರಾಜಕೀಯ ವಿದ್ಯಮಾನಗಳ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.