ಪ್ರತಾಪ ಚಂದ್ರಶೆಟ್ಟಿ ರಾಜೀನಾಮೆಯಿಂದ ತೆರವಾಗಿರುವ ಪರಿಷತ್ ಸಭಾಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆದು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 75 ಸದಸ್ಯ ಬಲದ ವಿಧಾನ ಪರಿಷತ್‍ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವಿರೋಧ ಆಯ್ಕೆಯನ್ನು ಉಪಸಭಾಪತಿ ಪ್ರಾಣೇಶ ಘೋಷಿಸಿದ ನಂತರ ಸಭಾಪತಿ ಅವರನ್ನು ಗೌರವಯುತವಾಗಿ ಎಲ್ಲ ಸದಸ್ಯರು ಪೀಠಕ್ಕೆ ಕರೆತಂದರು.
ಈ ವೇಳೆ ಪರಿಷತ್ ಸದಸ್ಯರಾದ ಪೂಜಾರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವರು ಅಭಿನಂದಿಸಿ ಮಾತನಾಡಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ದೇಶದಲ್ಲಿ ಶಿಕ್ಷಕರಾಗಿ ರಾಷ್ಟ್ರಪತಿಯಾಗಿದ್ದ ಸರ್ವಪಲ್ಲೀ ರಾಧಾಕೃಷ್ಣನ್ ಉದಾಹರಣೆ ಇತ್ತು. ಆದರೆ ರಾಜ್ಯದಲ್ಲಿ ಹೋರಾಟದ ಮೂಲಕ ಬಂದು ಶಿಕ್ಷಕರಾಗಿ ಸಭಾಪತಿಯಾದವರ ಉದಾಹರಣೆ ಇದೇ ಮೊದಲು.
ಈ ಅವಕಾಶ ರಾಜ್ಯದಲ್ಲಿ ಪ್ರಾಪ್ತವಾಗಿದೆ. ಹೊರಟ್ಟಿಯವರ ಹೋರಾಟ ಮನೋಭಾವ, ಸಾಮಾಜಿಕ ಕಳಕಳಿ, ಛಲ ಮತ್ತು ಸಮಾಜದ ಅಭಿವೃದ್ಧಿಯ ಬದ್ಧತೆ ಮೆಚ್ಚುವಂಥದು. ಮೇಲ್ಮನೆಯ ಕಲಾಪವನ್ನು ಅನುಭವ ಮಂಟಪದ ರೀರಿಯಲ್ಲಿ ಮುನ್ನಡೆಸಿಕೊಂಡು ಹೋಗುವ ಶಕ್ತಿ ಹೊರಟ್ಟಿ ಅವರಿಗೆ ಇದೆ ಎಂದು ಅಲ್ಲಮಪ್ರಭು, ಅಕ್ಕಮಹಾದೇವಿಯವರ ವಚನಗಳನ್ನು ಉಲ್ಲೇಖಿಸಿ ಸಮರ್ಥಿಸಿದರು. ಸಭಾಪತಿ ಆಯ್ಕೆ ಸಂದರ್ಭದ ಕಹಿ ಘಟನೆಗಳ ನೆನಪು ಬೇಡ. ಶಿವಸ್ವರೂಪಿಗೆ ಯಾವ ಅನಿಷ್ಟಗಳೂ ತಾಕುವುದಿಲ್ಲ ಎಂದು ವಚನಗನ್ನು ಹೇಳುವ ಮೂಲಕ ಧೈರ್ಯ ತುಂಬಿದರು.
ಒಟ್ಟಿನಲ್ಲಿ ಬಸವರಾಜ ಹೊರಟ್ಟಿ ಆಯ್ಕೆಗೆ ಬಹುತೇಕ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲ ಸೂಚಿಸಿದರು.