ಬೆಳಗಾವಿ ಜಿಲ್ಲೆಯ ಐವರು ಪ್ರಭಾವಿ ಸಚಿವರು ಸುಮಾರು ವರ್ಷಗಳಿಂದ ನಿಪ್ಪಾಣಿ ನಗರಸಭೆ ಮೇಲೆ ಭಗವಾ ಧ್ವಜ ಹಾರಾಡುತ್ತಿದ್ದರು ಅದನ್ನು ತೆರವುಗೊಳಿಸಲು ಯಾವುದೇ ರೀತಿ ಪ್ರಯತ್ನ ಮಾಡಿಲ್ಲ. ಹೀಗಾಗಿ ನಿಮಗೆ ಹತ್ತು ದಿನಗಳ ಗಡುವು ನೀಡುತ್ತಿದ್ದೇವೆ. ಹತ್ತು ದಿನಗಳಲ್ಲಿ ನೀವು ಧ್ವಜ ತೆರವುಗೊಳಿಸದೇ ಇದ್ದರೆ ತಕ್ಷಣವೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕು. ನಾವು ಕಾನೂನಾತ್ಮಕವಾಗಿ ಹೋರಾಡಿ ಧ್ವಜವನ್ನು ತೆರವುಗೊಳಿಸುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
: ಹೌದು ಕರ್ನಾಟಕ ರಾಜ್ಯದಲ್ಲಿ ಕನ್ನಡ ಧ್ವಜ ಹಾರಾಡಬೇಕು. ಆದರೆ ನಿಪ್ಪಾಣಿ ನಗರಸಭೆ ಮೇಲೆ ಹಲವು ವರ್ಷಗಳಿಂದ ಭಗವಾ ಧ್ವಜ ಹಾರಾಡುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗುತ್ತಲೇ ಬಂದಿದೆ. ಇದಕ್ಕೆ ಸಾಕಷ್ಟು ಕನ್ನಡ ಹೋರಾಟಗಾರರು ಪ್ರತಿಭಟನೆ ಹೋರಾಟ ಮಾಡಿದ್ರೂ ಕೂಡ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಡಳಿತ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ಇದರಿಂದ ಆಕ್ರೋಶಗೊಂಡಿರುವ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ. ಆದ್ದರಿಂದ ನಿಪ್ಪಾಣಿ ನಗರಸಭೆ ಭೇಟಿ ನೀಡಿದ ಭೀಮಪ್ಪ ಗಡಾದ್ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯ ಐವರು ಸಚಿವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಭಗವಾ ಧ್ವಜ ತೆರವುಗೊಳಿಸುವ ನಿಟ್ಟಿನಲ್ಲಿ 10 ದಿನಗಳ ಗಡುವು ಕೂಡ ನೀಡಿದ್ದಾರೆ.
ಬರೀ ಉದ್ಧವ್ ಠಾಕ್ರೆ ತಲೆ ಸರಿ ಇಲ್ಲ ಎಂದು ಹೇಳಿಕೆ ನೀಡಿದ್ರೆ ಸಾಲದು. ಜನರು ನಿಮ್ಮ ತಲೆ ಸರಿ ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹಲವಾರು ವರ್ಷಗಳಿಂದ ಇಲ್ಲಿ ಭಗವಾ ಧ್ವಜ ಹಾರಾಡುತ್ತಿದ್ದರೂ ಅದನ್ನು ತೆರವುಗೊಳಿಸಲು ನೀವು ಏನೂ ಪ್ರಯತ್ನ ಮಾಡಿಲ್ಲ. ಇನ್ನು 10 ದಿನಗಳಲ್ಲಿ ಧ್ವಜ ತೆರವುಗೊಳಿಸದೇ ಹೋದ್ರೆ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಿ ಕಾನೂನಾತ್ಮಕವಾಗಿ ಹೋರಾಟ ಮಾಡಿ ನಾನು ಭಗವಾ ಧ್ವಜ ತೆರವುಗೊಳಿಸುತ್ತೇನೆ ಎಂದು ಸವಾಲು ಹಾಕಿದರು.
ಅದೇ ರೀತಿ ಭಗವಾ ಧ್ವಜವನ್ನು ಕಾವಲು ಕಾಯಲು ಕರ್ನಾಟಕ ಸರ್ಕಾರ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ವಾಹನವನ್ನು ಇಟ್ಟಿರುವುದು ನಿಜವಾಗಲೂ ಕರ್ನಾಟಕ ರಾಜ್ಯಕ್ಕೆ ನಾಚಿಕಗೇಡಿನ ಸಂಗತಿಯಾಗಿದೆ. ಕರ್ನಾಟಕ ರಾಜ್ಯದ ಯಾವುದೇ ಸರ್ಕಾರಿ, ಅರೇ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ನಾಡಧ್ವಜ, ರಾಷ್ಟ್ರಧ್ವಜಗಳು ಹಾರಾಡಬೇಕೆ ಹೊರತು ಬೇರೆ ಭಾಷೆ, ಬೇರೆ ರಾಜ್ಯದ ಧ್ವಜಗಳು ಹಾರಾಡುವಂತಿಲ್ಲ. ಈ ಧ್ವಜವನ್ನು ಕಾಯಲು ಸರ್ಕಾರ ಏನಾದ್ರು ಪೊಲೀಸ್ ಇಲಾಖೆ ಆದೇಶ ಮಾಡಿದೆಯಾ ಎಂಬುದು ನನ್ನ ಪ್ರಶ್ನೆಯಾಗಿದೆ. ಕಾನೂನು ಬಾಹಿರವಾಗಿ, ಕರ್ನಾಟಕದ ನೀತಿಗೆ ವಿರೋಧವಾಗಿ, ಸಮಗ್ರ ಕನ್ನಡಿಗರ ಭಾವನೆಗಳನ್ನು ಕೆರಳಿಸುವ ಈ ಕೃತ್ಯಕ್ಕೆ ತಮ್ಮ ಸರ್ಕಾರ ಬೆಂಬಲ ನೀಡುತ್ತಿರುವುದು ಕನ್ನಡಿಗರನ್ನು ಕೆರಳಿಸುವುದರಲ್ಲಿ ಸಂಶಯವಿಲ್ಲ ಎಂದು ಇದೇ ವೇಳೆ ಭೀಮಪ್ಪ ಗಡಾದ ಸರ್ಕಾರಕ್ಕೆ ಎಚ್ಚರಿಸಿದರು.
ಒಟ್ಟಾರೆ ಪೊಲೀಸ್ ಇಲಾಖೆಯಲ್ಲಿ ನಾನು ಮನವಿ ಮಾಡಿಕೊಳ್ಳುತ್ತೇವೆ. ಭಗವಾ ಧ್ವಜ ಕಾಯಲು ಸಶಸ್ತ್ರ ಮೀಸಲು ಪಡೆ ವಾಹನ ಇಟ್ಟಿದ್ದಿರಿ ಅದನ್ನು ವಾಪಸ್ಸು ಪಡೆದುಕೊಂಡು ಕನ್ನಡ ನಾಡಿನ ಘನತೆ ಗೌರವನ್ನು ಹೆಚ್ಚಿಸಬೇಕು ಎಂದು ಭೀಮಪ್ಪ ಗಡಾದ್ ಆಗ್ರಹಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಏನು ಕ್ರಮ ಕೈಗೊಳ್ಳುತ್ತೆ ಎಂದು ಕಾಯ್ದು ನೋಡಬೇಕಿದೆ.