ಬೆಳಗಾವಿ ತಾಲೂಕಿನ ಬಿಕೆ ಕಂಗ್ರಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿಯಡಿ ಕೆಲಸ ಮಾಡುತ್ತಿದ್ದ ಸುಮಾರು 400ಕ್ಕೂ ಹೆಚ್ಚು ಮಹಿಳೆಯರನ್ನು ಭೇಟಿ ಮಾಡಿದ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಮಸ್ಯೆಗಳನ್ನು ಆಲಿಸಿದರು.
ಭಾನುವಾರ ಕೆಲಸದ ಸ್ಥಳಕ್ಕೆ ತೆರಳಿದ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳೆಯರ ಆರೋಗ್ಯ ಮತ್ತು ಕುಂದುಕೊರತೆಗಳ ಬಗ್ಗೆ ವಿಚಾರಿಸಿದರು. ಅವರೊಂದಿಗೆ ಸುದೀರ್ಘ ಸಮಯದವರೆಗೆ ಕಳೆದ ಹೆಬ್ಬಾಳಕರ್, ಕೆಲಸ ಮಾಡುವ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ವಿಚಾರಿಸಿದರು. ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮಹಿಳೆ ಅಬಲೆಯಲ್ಲ, ಸಬಲೆ. ಇಂತಹ ಕಠಿಣ ಕೆಲಸಗಳ ಮೂಲಕ ಇಡೀ ಕುಟುಂಬದ ಜೀವಾನಾಧಾರವಾಗಿರುವ ಮಹಿಳೆಯರು, ಇಡೀ ಸಮಾಜಕ್ಕೆ ಆದರ್ಶಪ್ರಾಯರಾಗಿ ನಿಲ್ಲುತ್ತಾರೆ ಎಂದ ಹೆಬ್ಬಾಳಕರ್ ಹೇಳಿ, ನಿಮ್ಮ ಸಮಸ್ಯೆಗಳನ್ನು ನಿವಾರಿಸಿದ್ದಕ್ಕೆ ಸಹೋದರಿಯರ ತೊಂದರೆಗಳೆನ್ನೆಲ್ಲ ಸ್ಥಳದಲ್ಲೇ ನಿವಾರಿಸಿದ್ದಕ್ಕೆ ಮನಸ್ಸಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅವರ ಬದುಕಿನ ಕಷ್ಟಗಳು ಆದಷ್ಟು ಬೇಗ ನಿವಾರಣೆಯಾಗಲಿ ಎಂದು ಹೆಬ್ಬಾಳಕರ್ ಪ್ರತಿಕ್ರಿಯಿಸಿದರು.
ಇದೇ ವೇಳೆ ಮಹಿಳೆಯರ ಜೊತೆ ಲಕ್ಷ್ಮೀ ಹೆಬ್ಬಾಳ್ಕರ್ ಉಪಹಾರ ಸೇವಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಉದ್ಯೋಗ ಖಾತ್ರಿಗೆ ಸಂಬಂಧಪಟ್ಟ ಅಧಿಕಾರಿಗಳು, ಪಿಡಿಓ ಬರ್ಗಿ, ಇಂಜಿನಿಯರ್ ಬಸವರಾಜ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.