ಮೊನ್ನೆಯಷ್ಟೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಧ್ವನಿ ಎತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಕೂಡ ಚರ್ಚೆಗೆ ಅವಕಾಶ ಕೇಳಿದ್ರು ಆದ್ರೆ ಇದಕ್ಕೆ ಸ್ಪೀಕರ್ ಕಾಗೇರಿ ಅವಕಾಶ ಮಾಡಿಕೊಡಲಿಲ್ಲ.
: ಹೌದು ವಿಧಾನಮಂಡಲದ 5ನೇ ದಿನದ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೋತ್ತರ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಮ್ಮದು ವಿಷಯ ಏನು ತೆಗೆದುಕೊಳ್ಳುತ್ತಿರೋ ಹೇಗೆ..? ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪ್ರಶ್ನಿಸಿದರು. ನೀವು ಅದನ್ನು ದಾರಿ ತಪ್ಪಿಸುತ್ತಿದ್ದಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಅವಕಾಶ ಕೊಡದ ಹಿನ್ನೆಲೆ ರೈತರ ಕಬ್ಬಿನ ಬಾಕಿ ಬಿಲ್ ಕುರಿತು ಮಾತನಾಡಿದ ಯತ್ನಾಳ್ ಕರ್ನಾಟಕ ರಾಜ್ಯದಲ್ಲಿ 3808 ಕೋಟಿ 84 ಲಕ್ಷ ರೂಪಾಯಿ ಕಬ್ಬಿನ ಬಿಲ್ ಬಾಕಿಯಿದೆ. ಶೇ.41ರಷ್ಟು ಇನ್ನು ಬಾಕಿ ಕೊಡಬೇಕಿದೆ. ಇಲ್ಲಿಯವರೆಗೆ ಅನೇಕ ಸಕ್ಕರೆ ಕಾರ್ಖಾನೆಗಳು ಬಿಲ್ ಕೊಡದೇ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಉತ್ತರದಲ್ಲಿ ಸಚಿವರು ಹಳೆ ಬಾಕಿ ಬಿಲ್‍ನಲ್ಲಿ ಬಹಳ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿದ್ದೇವೆ.
ಕೇಂದ್ರ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಬಿಲ್ ಪಾವತಿ ಮಾಡಿದ್ದೇವೆ ಎನ್ನುವ ಮೂಲಕ ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಇನ್ನು ಕೆಲವೊಂದು ಕಾರ್ಖಾನೆಗಳಲ್ಲಿ ಸಕ್ಕರೆ ಎಲ್ಲಾ ಖಾಲಿಯಾಗಿದೆ. ಖಾಲಿ ಗೋಡಾವನ್‍ಗಳಿಗೆ ಸಕ್ಕರೆ ಇಲ್ಲದೇ ಸಕ್ಕರೆ ಇದೇ ಎಂದು ಹೇಳಿ ಡಿಸಿಸಿ ಬ್ಯಾಂಕ್‍ಗಳಲ್ಲಿ ಸಾಲ ಪಡೆದುಕೊಳ್ಳುತ್ತಿರುವ ಬಹುದೊಡ್ಡ ಹಗರಣ ನಡೆಯುತ್ತಿದೆ ಎಂದು ಆರೋಪಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಯಾವ್ಯಾವ ಸಕ್ಕರೆ ಕಾರ್ಖಾನೆಗಳಲ್ಲಿ ಎಷ್ಟು ಸಕ್ಕರೆ ಇದೆ..? ಅದೇ ರೀತಿ ಡಿಸಿಸಿ ಬ್ಯಾಂಕ್‍ಗಳಿಂದ ಯಾವ್ಯಾವ ಕಾರ್ಖಾನೆಗಳು ಎಷ್ಟು ಸಾಲ ಪಡೆದುಕೊಂಡಿವೆ ಎಂಬ ಕುರಿತು ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಕ್ಕರೆ ಸಚಿವ ಎಂಟಿಬಿ ನಾಗರಾಜ್ 3800 ಕೋಟಿ ಬಾಕಿ ಬಿಲ್ ರೈತರಿಗೆ ಕೊಡುವುದಿದೆ. ಅದರಲ್ಲಿ ಹಿಂದಿನ ಬಾಕಿ ಉಳಿದಿದೆ. ಮಾರ್ಚ, ಎಪ್ರೀಲ್ ತಿಂಗಳಲ್ಲಿ ಇನ್ನು ಕಬ್ಬು ಅರಿಯುವುದು ಬಾಕಿ ಉಳಿದಿದೆ. ಹೀಗಾಗಿ ಹಿಂದಿನ ಬಾಕಿ ಹಾಗೂ ಮುಂದೆ ಅರಿಯುವ ಕಬ್ಬಿನ ಬಿಲ್ ಕೊಡುವ ಸಂಬಂಧ ಸಭೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಸನಗೌಡ ಪಾಟೀಲ್ ಯತ್ನಾಳ್ ನಾಲ್ಕೈದು ವರ್ಷಗಳಿಂದ ರೈತರಿಗೆ ಅನೇಕ ಕಾರ್ಖಾನೆಗಳು ಬಿಲ್ ಕೊಟ್ಟಿಲ್ಲ, ಇದರಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಹಿಂದಿನ ವರ್ಷದ ಬಾಕಿ ಬಿಲ್ ಈ ವರ್ಷಕ್ಕೆ ಸೇರಿಸಿ 3878 ಕೋಟಿ ಬಿಲ್ ತೋರಿಸಲಾಗುತ್ತಿದೆ. ಇನ್ನು 15 ದಿನಗಳಲ್ಲಿ ಕಬ್ಬಿನ ಬಿಲ್ ಪಾವತಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿಮ್ಮ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಖಾಲಿ ಗೋಡಾವನ್‍ಗಳನ್ನು ತೋರಿಸಿ ಡಿಸಿಸಿ ಬ್ಯಾಂಕ್‍ನಲ್ಲಿ ಸಾಲ ಪಡೆಯುತ್ತರುವ ಕಾರ್ಖಾನೆಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಮತ್ತು ಸಕ್ಕರೆ ಸಚಿವರಿಗೆ ಮತ್ತೆ ಆಗ್ರಹಿಸಿದರು.
ಬಳಿಕ ಮತ್ತೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್ ಬಹಳಷ್ಟು ಸಕ್ಕರೆ ಕಾರ್ಖಾನೆಗಳ ಮೇಲೆ ದೂರು ಕೇಳಿ ಬಂದಿದೆ. ರಾಜ್ಯದಲ್ಲಿ 87 ಸಕ್ಕರೆ ಕಾರ್ಖಾನೆಗಳಿದ್ದು, ಇದರಲ್ಲಿ ಯಾವುದೇ ತಾರತಮ್ಯವಾಗದೇ ರೈತರಿಗೆ ಅನ್ಯಾಯವಾಗಿದ್ದು ಕಂಡು ಬಂದ್ರೆ ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸಿಕೊಂಡು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
: ಒಟ್ಟಾರೆ ರಾಜ್ಯದಲ್ಲಿ ಕೆಲ ಕಾರ್ಖಾನೆಗಳು ಸಕ್ಕರೆ ಇಲ್ಲದೇ ಖಾಲಿ ಗೋಡಾವನ್ ತೋರಿಸಿ ಡಿಸಿಸಿ ಬ್ಯಾಂಕ್‍ಗಳಲ್ಲಿ ಸಾಲ ಪಡೆದುಕೊಳ್ಳುತ್ತಿವೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದು. ಅದ್ಯಾವ ಕಾರ್ಖಾನೆಗಳು ಎಂಬುದನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುತ್ತಾ ಎಂದು ಕಾಯ್ದು ನೋಡಬೇಕಿದೆ.