Belagavi

ದೆಹಲಿ ಹೋರಾಟ ರೈತರ ಹೋರಾಟವಾಗಿ ಉಳಿದಿಲ್ಲ..ಕಾಂಗ್ರೆಸ್ ಹೈಜಾಕ್ ಮಾಡಿದೆ..ಈರಣ್ಣ ಕಡಾಡಿ ಆರೋಪ

Share

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ರೈತರ ಹೋರಾಟವಾಗಿ ಉಳಿದಿಲ್ಲ. ಇದು ಪ್ರಾಯೋಜಿತ ಹೋರಾಟವಾಗಿದೆ. ಅಲ್ಲದೇ ಕಾಂಗ್ರೆಸ್ ನಾಯಕರು ಈ ಹೋರಾಟವನ್ನು ಹೈಜಾಕ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಗಂಭೀರ ಆರೋಪ ಮಾಡಿದರು.

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ ವಿಚಾರಕ್ಕೆ ಶನಿವಾರ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಪ್ರಧಾನಿ ಮೋದಿ ಮೇಲೆ ಆರೋಪ ಮಾಡಲು ಕಾಂಗ್ರೆಸ್‍ನವರ ಬಳಿ ಯಾವುದೇ ವಿಚಾರ ಇಲ್ಲದಿರುವ ಹಿನ್ನೆಲೆ ರೈತರ ಹೆಗಲ ಮೇಲೆ ಬಂದೂಕು ಇಟ್ಟು ಮುಗ್ದ ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇದು ರೈತರ ಹೋರಾಟವಾಗಿ ಉಳಿದಿಲ್ಲ. ಕಾಂಗ್ರೆಸ್‍ನವರು ಹೈಜಾಕ್ ಮಾಡಿದ್ದಾರೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿ ವಿವಿಧ ವಿಪಕ್ಷಗಳು ಯಾವ ಅಂಶಗಳ ವಿರೋಧ ಎನ್ನುವುದನ್ನು ಎತ್ತಿ ಮಾತನಾಡದೇ ಕೇವಲ ಇದು ರೈತ ವಿರೋಧಿಯಾಗಿದೆ, ಇದು ಕರಾಳ ಕಾನೂನಾಗಿದೆ ಎಂದು ಜನರಲ್ ಆಗಿ ಆರೋಪಿಸುತ್ತಿದ್ದಾರೆ. ಆದರೆ ನಿಖರವಾಗಿ ಯಾವ ಆಂಶ ರೈತ ವಿರೋಧವಾಗಿದೆ ಎಂದು ತಿಳಿಸಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ಅದೇ ರೀತಿ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳಲ್ಲಿ ಯಾವ ಅಂಶ ರೈತ ವಿರೋಧಿಯಿದೆ, ಯಾವ ಅಂಶ ತಪ್ಪಿದೆ ಎಂದು ಹೇಳುವಲ್ಲಿ ರೈತ ಸಂಘಟನೆ ಮುಖಂಡರು ವಿಫಲರಾಗಿದ್ದಾರೆ. ಕೇವಲ ಹರಿಯಾಣ, ಪಂಜಾಬ್ ರೈತರು ಪ್ರತಿಭಟನೆ ಮಾಡಿದ್ರೆ ಇಡೀ ದೇಶಕ್ಕೆ ಅದು ಅನ್ವಯಿಸುವುದಿಲ್ಲ. ರಾಜ್ಯದ ರೈತ ಸಂಘಟನೆಗಳು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಯಾಕೆ ಬೆಂಬಲಿಸುತ್ತಿದೆ ಎಂಬುದನ್ನು ತಿಳಿಸಬೇಕು. ಕೇವಲ ನಿಮ್ಮ ಸಂಘಟನೆಗಳ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಿರೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಅದೇ ರೀತಿ ಭಾರತದಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ವಿದೇಶಿಗರು ಬೆಂಬಲ ನೀಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ನಮ್ಮ ಸರ್ಕಾರ ಈ ಬಗ್ಗೆ ಬಹಳ ಸ್ಪಷ್ಟವಾಗಿದೆ. ಲೋಕಸಭೆಯಲ್ಲಿ ಕೃಷಿ ಸಚಿವರು ಕೂಡ ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ಸೋಮವಾರ ಪ್ರಧಾನಿ ಮೋದಿ ಅವರು ಕೂಡ ಈ ಬಗ್ಗೆ ಸ್ಪಷ್ಟವಾದ ಉಲ್ಲೇಖ ಮಾಡಲಿದ್ದಾರೆ. ರಾಜ್ಯದ ರೈತರು ಈ ಬಗ್ಗೆ ಯಾವುದೇ ರೀತಿ ಬೆಲೆ ಕೊಡುವ ಅವಶ್ಯಕತೆಯಿಲ್ಲ ಎಂದು ಈರಣ್ಣ ಕಡಾಡಿ ಮನವಿ ಮಾಡಿಕೊಂಡರು.

ಒಟ್ಟಾರೆ ರೈತರಿಗೆ ಒಳ್ಳೆಯದು ಆಗಲಿ ಎಂಬ ಉದ್ದೇಶದಿಂದ ಮೂರು ಕೃಷಿ ಮಸೂದೆಗಳನ್ನು ಜಾರಿಗೊಳಿಸಿದ್ದೇವೆ. ನಿರಾಧಾರವಾಗಿ ಆರೋಪ ಮಾಡುವುದು ಸರಿಯಲ್ಲ. ಈ ಕಾನೂನುಗಳಲ್ಲಿ ನಿಖರವಾಗಿ ಯಾವ ಅಂಶ ರೈತ ವಿರೋಧಿಯಾಗಿದೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಹೋರಾಟಗಾರರಿಗೆ ಈರಣ್ಣ ಕಡಾಡಿ ಸವಾಲು ಹಾಕಿದ್ದು ಕಂಡು ಬಂತು.

 

 

 

Tags:

error: Content is protected !!