Belagavi

ಡಿಸಿಪಿ ವಿಕ್ರಮ್ ಆಮ್ಟೆ ಜನಸಂಪರ್ಕ ಸಭೆಯಲ್ಲಿ ಕೇಳಿ ಬಂತು ವೇಶ್ಯಾವಾಟಿಕೆ, ಪಾರ್ಕಿಂಗ್ ಸಮಸ್ಯೆ

Share

ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ವೇಶ್ಯಾವಟಿಕೆ ಹಾಗೂ ಪಾರ್ಕಿಂಗ್ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಸ್ಥಳೀಯರು ಡಿಸಿಪಿ ಡಾ.ವಿಕ್ರಮ್ ಆಮ್ಟೆ ಅವರ ಗಮನಕ್ಕೆ ತಂದರು.

ಇದೇ ಮೊದಲ ಬಾರಿಗೆ ಬೆಳಗಾವಿಯ ಖಡೇ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಡಾ.ವಿಕ್ರಮ್ ಆಮ್ಟೆ ಅವರ ನೇತೃತ್ವದಲ್ಲಿ ಜನರ ಕುಂದು ಕೊರತೆ ಆಲಿಸಲು ಜನಸಂಪರ್ಕ ಸಭೆಯನ್ನು ಕರೆಯಲಾಗಿತ್ತು. ಖಡೇ ಬಜಾರ್ ಪೊಲೀಸ್ ಠಾಣೆ ಮುಂಭಾಗದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಆರಂಭದಲ್ಲಿ ಡಿಸಿಪಿ ವಿಕ್ರಮ್ ಆಮ್ಟೆ ತುರ್ತು ಸಹಾಯವಾಣಿ 112 ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ತುರ್ತು ಸಂದರ್ಭಗಳಲ್ಲಿ ನೀವು ಈ ನಂಬರ್‍ಗೆ ಕಾಲ್ ಮಾಡಿದ 15 ನಿಮಿಷಗಳಲ್ಲಿ ನಿಮ್ಮ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಸಭೆಯಲ್ಲಿ ಭಾಗಿಯಾಗಿದ್ದ ಸಾರ್ವಜನಿಕರು ಮಾತನಾಡಿ ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆಯಾಗುತ್ತಿದೆ. ಅದೇ ರೀತಿ ಪ್ರಮುಖ ರಸ್ತೆಗಳಾದ ಕಾಲೇಜ್ ರೋಡ್, ಖಡೇಬಜಾರ್, ಗಣಪತ್ ಗಲ್ಲಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಜನರಿಗೆ ಸಂಚರಿಸಲು ತೀವ್ರ ಪರದಾಡುವಂತಾಗಿದೆ. ಹೀಗಾಗಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಗಂಭೀರವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಅದೇ ರೀತಿ ಬುರುಡ ಗಲ್ಲಿ ಮಾಸ್ಟರ್ ಪ್ಲಾನ್ ಮೂಲಕ ರಸ್ತೆ ಅಗಲೀಕರಣ ಮಾಡಿದ್ರೆ ಸಂಚಾರ ಸಮಸ್ಯೆ ನಿಯಂತ್ರಿಸಬಹುದು. ಇನ್ನು ಗಣಪತ್ ಗಲ್ಲಿ ಮರಾಠಿ ಶಾಲೆ ಪಕ್ಕದಲ್ಲಿರುವ ವೈನ್‍ಶಾಪ್ ಬಂದ್ ಮಾಡಬೇಕು. ಅದೇ ರೀತಿ ಗಣಪತ್ ಗಲ್ಲಿಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ವೇಶ್ಯಾವಟಿಕೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.

ನಂತರ ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ನಂತರ ಮಾತನಾಡಿದ ಡಿಸಿಪಿ ವಿಕ್ರಮ್ ಆಮ್ಟೆ ಈ ರೀತಿ ಜನಸಂಪರ್ಕ ಸಭೆಯನ್ನು ನಿರಂತರವಾಗಿ ನಡೆಸಲಾಗುವುದು. ನೀವು ತಿಳಿಸಿರುವ ಸಮಸ್ಯೆಗಳಲ್ಲಿ ನಮ್ಮ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳನ್ನು 15 ದಿನಗಳಲ್ಲಿ ಪರಿಹರಿಸಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.

ಸಭೆಯಲ್ಲಿ ಖಡೇಬಜಾರ್ ಎಸಿಪಿ ಚಂದ್ರಪ್ಪ, ಟ್ರಾಫಿಕ್ ಎಸಿಪಿ ಶರಣಪ್ಪ, ಸಿಪಿಐ ಧೀರಜ್ ಶಿಂಧೆ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.

 

Tags:

error: Content is protected !!