ಬೆಳಗಾವಿ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಚಾಲನೆ ನೀಡಿದರು. ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನ ಕಾರ್ಯಕ್ರಮ ನಡೆಯಲಿದ್ದು, 2 ಸಾವಿರಕ್ಕೂ ಹೆಚ್ಚು ಸರಕಾರಿ ನೌಕರರು, ಕುಟುಂಬದವರು ಪಾಲ್ಗೊಂಡಿದ್ದಾರೆ.
ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಎರಡು ದಿನಗಳ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಶುಕ್ರವಾರ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ ಎಚ್.ವಿ ಸೇರಿದಂತೆ ಸರಕಾರಿ ಅಧಿಕಾರಿಗಳು, ಗಣ್ಯರ ಸಮ್ಮುಖದಲ್ಲಿ ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ, ಕೋವಿಡ್ ಸೋಂಕು ಕಡಿಮೆಯಾಗಿ ಮತ್ತೆ ಜಗತ್ತು ಸಹಜ ಸ್ಥಿತಿಗೆ ಬರುತ್ತಿರುವ ಸಂದರ್ಭದಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆ ಏರ್ಪಡಿಸಿರುವುದು ಸಂತಸದ ವಿಷಯವಾಗಿದೆ. ಇಷ್ಟು ದಿನ ಒತ್ತಡದಲ್ಲೇ ಕೆಲಸ ಮಾಡಿದ್ದೇವೆ. ಒತ್ತಡದಲ್ಲೇ ಒಳ್ಳೆಯ ಕೆಲಸಗಳಾಗುತ್ತವೆ.
ಕ್ರೀಡಾಕೂಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಪಾಲ್ಗೊಂಡು ಅಭಿಮಾನ ಮೆರೆದಿದ್ದಾರೆ. ನೌಕರರ ಸಂಘದ ಪ್ರಮುಖ ಬೇಡಿಕೆಯಾಗಿರುವ ನೌಕರರ ಸಂಘಕ್ಕೆ ಎರಡು ಎಕರೆ ಜಮೀನನ್ನು ನನ್ನ ಅಧಿಕಾರಾವಧಿಯಲ್ಲೇ ಮಂಜೂರು ಮಾಡಿಸಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ ಎಚ್.ವಿ.ಮಾತನಾಡಿ, ದೈಹಿಕ ಸಾಮಥ್ರ್ಯ, ಮಾನಸಿಕ ಆರೋಗ್ಯ ಇಲ್ಲದಿದ್ದರೆ ಯಾವ ಕೆಲಸಗಳೂ ಸುಸೂತ್ರವಾಗಿ ಆಗುವುದಿಲ್ಲ. ಕ್ರೀಡೆ ಮತ್ತು ಮನರಂಜನೆ ಮೂಲಕ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿರುವುದು ಒಳ್ಳೆಯ ಸಂಗತಿಯಾಗಿದೆ. ಕೋವಿಡ್ ಸೋಂಕು ಕಡಿಮೆಯಾಗಿದ್ದರೂ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಎಲ್ಲರಿಗೂ ವ್ಯಾಕ್ಸಿನ್ ಸಿಗುವವರೆಗೂ ಮುಂಜಾಗ್ರತೆ ಅಗತ್ಯವಾಗಿದೆ. ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಲಾಭ ಪಡೆದು ಸರಕಾರಿ ನೌಕರರು ಇನ್ನಷ್ಟು ಸದೃಢರಾಗಿ ಕೆಲಸ ಮಾಡುವಂತಾಗಲಿ, ರಾಜ್ಯಕ್ಕೆ ದೇಶಕ್ಕೆ ಹೆಸರು ತರಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಗದೀಶಗೌಡ ಪಾಟೀಲ ಮಾತನಾಡಿ, ಗಳಿಕೆ ರಜೆ ನಗದೀಕರಣ, ಶವ ಸಂಸ್ಕಾರಕ್ಕೆ ವೆಚ್ಚ, ಡಯಾಲಿಸಿಸ್ ಚಿಕಿತ್ಸೆಗೆ ರಜೆ, 10 ದಿನಗಳ ಸಿಎಲ್‍ನ್ನು 15ದಿನಗಳಿಗೆ ಹೆಚ್ಚಿಸುವುದು, ಸರಕಾರಿ ನೌಕರರ ಚಿಕಿತ್ಸೆಗೆ ಆರೋಗ್ಯ ಸಿರಿ ಯೋಜನೆ ಹೀಗೆ ಹಲವು ಬೇಡಿಕೆಗಳನ್ನು ಈಡೇರಿಸಿರುವ ರಾಜ್ಯ ಸರಕಾರ ಎನ್‍ಪಿಎಸ್ ರದ್ದು, ರಾಜ್ಯ ಸರಕಾರಿ ನೌಕರರಿಗೂ ಕೇಂದ್ರ ಸರಕಾರಿ ನೌಕರರ ವೇತನ ಬೇಡಿಕೆ ಈಡೇರಿಸಬೇಕು.
ಕ್ರೀಡಾಕೂಟದಲ್ಲಿ ನೌಕರರು ಉತ್ಸಾಹದಿಂದ ಪಾಲ್ಗೊಂಡಿರುವುದು ಹೆಮ್ಮೆ ಮೂಡಿಸುವಂತಿದೆ, ಸರಕಾರಿ ನೌಕರರ ಭವನಕ್ಕೆ ಜಿಲ್ಲಾ ಮಟ್ಟದಲ್ಲಿ ಎರಡು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ನೌಕರ ಮಹಾದೇವ ಪವಾರ್, ವಿಜಯಕುಮಾರ್ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗೌರಿಶಂಕರ ಕಡೇಚೂರ, ಡಿಡಿಪಿಐ ಡಾ.ಎ.ಬಿ.ಪುಂಡಲೀಕ, ಚಂದ್ರಶೇಖರ ಕೋಲಕಾರ, ಆರ್.ಐ.ಬಿಸಗುಪ್ಪಿ, ಎಂ.ಐ.ಪವಾರ್, ಶ್ರವಣ ರಾಣವ್ವಗೋಳ ಎಂ.ಎಸ್.ಕಲ್ಮಠ, ಕಿರಣ ಸಾವಂತನವರ, ಶಂಕರ ಗೋಕಾವಿ ಮತ್ತಿತರರು ಪಾಲ್ಗೊಂಡಿದ್ದರು.