ಖಾನಾಪುರದ ನಿಸರ್ಗ ಧಾಬಾ ಬಳಿ ಗಾಯಗೊಂಡು ಮರದ ಮೇಲಿಂದ ಬಿದ್ದು ಒದ್ದಾಡುತ್ತಿದ್ದ ರಣಹದ್ದು ಪಕ್ಷಿಯನ್ನು ಬೆಳಗಾವಿಯ ಫೇಸ್ ಬುಕ್ ಫ್ರೆಂಡ್ಸ್ ಸರ್ಕಲ್‍ನ ಸಂತೋಷ ಧರೇಕರ್ ಮತ್ತು ವರುಣ ಕಾರ್ಕಾನೀಸ್ ಮತ್ತು ತಂಡದವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಖಾನಾಪುರ ಬಳಿಯ ನಿಸರ್ಗ ಧಾಬಾ ಮಾಲಿಕ ಮೈಕಲ್ ನೊರೊನ್ಹಾ ಕರೆಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಬೆಳಗಾವಿಯ ಫೇಸ್ ಬುಕ್ ಫ್ರೆಂಡ್ಸ್ ಸರ್ಕಲ್‍ನ ಸಂತೋಷ ಧರೇಕರ್ ಮತ್ತು ವರುಣ ಕಾರ್ಕಾನೀಸ್ ಮತ್ತು ತಂಡದವರು ಗಾಯಗೊಂಡು ಅತ್ತಿಂದಿತ್ತ, ಇತ್ತಿಂದತ್ತ ಹಾರಾಡುತ್ತಿದ್ದ ರಣಹದ್ದನ್ನು ಕಂಡು ಬೆಳಗಾವಿ ಪ್ರಾಣಿ ದಯಾ ಸಂಘಟನೆಯ ವರುಣ ಕಾರ್ಕಾನೀಸ್ ರಣಹದ್ದಿಗೆ ಪ್ರಥಮೋಪಚಾರ ಮಾಡಿದರು. ಗಾಯಗೊಂಡು ಪರದಾಡುತ್ತಿದ್ದ ರಣಹದ್ದಿನ ಜೀವ ಉಳಿಸಿ ಉಪಚರಿಸಿದರು.
ನಂತರ ಗಾಯಾಳು ರಣಹದ್ದಿಗೆ ರಕ್ಷಣೆ ಒದಗಿಸಲು ತಮ್ಮ ಜಾಕೇಟ್‍ನ್ನೇ ಹಾಸಿಗೆ ಮಾಡಿದ ತಂಡದ ಸಂತೋಷ ಧರೇಕರ್, ಬಾಕ್ಸ್ ಒಂದರಲ್ಲಿ ರಣಹದ್ದನ್ನು ಇರಿಸಿ ಬೈಕ್ ಮೇಲೆ 28 ಕಿ.ಮೀ. ಕ್ರಮಿಸಿ ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸಿದರು.ಈ ವೇಳೆ ಆರ್‍ಎಫ್‍ಓ ಶಿವಾನಂದ ಮಗದುಮ್, ಡೆಪ್ಯೂಟಿ ಆರ್‍ಎಫ್‍ಒ ವಿನಯ ಗೌಡರ್, ಮಲ್ಲಿಕಾರ್ಜುನ ಜೊತೆನ್ನವರ, ಎಂ.ಎ.ಕಿಲ್ಲೇದಾರ ಮತ್ತು ಅರಣ್ಯ ಸಿಬ್ಬಂದಿ ಫೇಸ್ ಬುಕ್ ಫ್ರೆಂಡ್ಸ್ ಸರ್ಕಲ್‍ನ ಕಾರ್ಯವನ್ನು ಪ್ರಶಂಸಿಸಿದರು.
ಈ ವೇಳೆ ಫೇಸ್ ಬುಕ್ ಫ್ರೆಂಡ್ಸ್ ಅಸೋಸಿಯೇಶನ್‍ನ ಮುಖ್ಯಸ್ಥ ಸಂತೋಷ ಧರೇಕರ್ ಮಾತನಾಡಿ, ರಣಹದ್ದನ್ನು ರಕ್ಷಿಸಲು ತಾವು ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.
ಯಾವುದೇ ಪ್ರಾಣಿ, ಪಕ್ಷಿ ಅಪಾಯದಲ್ಲಿದ್ದರೆ ಸಾರ್ವಜನಿಕರು ಜೀವ ಉಳಿಸಲು ಮುಂದಾಗಬೇಕು. ಅಗತ್ಯ ನೆರವು ಬೇಕಿದ್ದರೆ 9986809825 ಇಲ್ಲಿಗೆ ಸಂಪರ್ಕಿಸಬೇಕು ಎಂದು ತಿಳಿಸಿದರು. ಒಟ್ಟಿನಲ್ಲಿ ರಣಹದ್ದನ್ನು ರಕ್ಷಿಸಿದ ಫೇಸ್ ಬುಕ್ ಫ್ರೆಂಡ್ಸ್‍ನ ಕಾರ್ಯ ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.