ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಶೇ.30ರಷ್ಟು ಬೋಧನಾ ಶುಲ್ಕ ವಿನಾಯಿತಿ ಮಾಡಿರುವ ರಾಜ್ಯ ಸರ್ಕಾರದ ಆದೇಶ ವಿರೋಧಿಸಿ ಬೆಳಗಾವಿಯ ವಿವಿಧ ಖಾಸಗಿ ಶಾಲೆಗಳ ಶಿಕ್ಷಕರು ಬೃಹತ್ ಪ್ರತಿಭಟನೆ ನಡೆಸಿದರು. ನೀವು ಎಷ್ಟು ಬೇಕಾದಷ್ಟು ಶುಲ್ಕ ವಿನಾಯಿತಿ ಮಾಡಿ ಆದರೆ ನಮಗೆ ಸರ್ಕಾರದಿಂದಲೇ ಶುಲ್ಕವನ್ನು ನೀಡುವ ಕೆಲಸ ಮಾಡಿ ಎಂದು ಆಗ್ರಹಿಸಿದ್ದಾರೆ.

ಹೌದು ಮಹಾಮಾರಿ ಕೊರೊನಾ ಹಿನ್ನೆಲೆ ಜನಸಾಮಾನ್ಯರು ಸಂಕಷ್ಟದಲ್ಲಿರುವ ಹಿನ್ನೆಲೆ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಪಾಲಕರ ಒತ್ತಡದಿಂದ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಬೋಧನಾ ಶುಲ್ಕದಲ್ಲಿ ಶೇ.30ರಷ್ಟು ವಿನಾಯಿತಿ ನೀಡಿ ಆದೇಶ ಹೊರಡಿಸಿದ್ದಾರೆ. ಸಧ್ಯ ಇದು ಖಾಸಗಿ ಶಾಲಾ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ನೀವು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಶುಲ್ಕದಲ್ಲಿ ವಿನಾಯಿತಿ ನೀಡುವ ಮೂಲಕ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಿರಿ, ಬರೀ ಬೆಂಗಳೂರು ಕೇಂದ್ರಿತವಾದ ಶಾಲೆಗಳನ್ನು ದೃಷ್ಟಿಯಿಂದ ಈ ರೀತಿ ಆದೇಶ ಹೊರಡಿಸಿದ್ದಿರಿ ಎಂದು ಬೆಳಗಾವಿಯ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳ ಶಿಕ್ಷಕರು ಬುಧವಾರ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿ.ಜಿ.ಚಿಟ್ನೀಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಡಾ.ನವೀನಾ ಶೆಟ್ಟಿಗಾರ, ಫೀ ತುಂಬುವ ತಾಕತ್ತು ಇದ್ದ ಪಾಲಕರೇ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಕಲಿಸುತ್ತಾರೆ.
ಹೀಗಾಗಿ ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿನ ಫೀಸ್‍ಗೂ ಬೆಳಗಾವಿ ನಗರದ ಖಾಸಗಿ ಶಾಲೆಗಳಲ್ಲಿನ ಫೀಸ್‍ಗೂ ಸಾಕಷ್ಟು ವ್ಯತ್ಯಾಸವಿದೆ ಎಂಬುದು ಶಿಕ್ಷಣ ಸಚಿವರಿಗೆ ತಿಳಿಯಬೇಕಿತ್ತು. ಬರೀ ವಿದ್ಯಾರ್ಥಿಗಳು, ಪಾಲಕರ ಬಗ್ಗೆ ಮಾತ್ರ ಸರ್ಕಾರ ಗಮನಹರಿಸುತ್ತಿದೆ. ಆದರೆ ಅವರ ಫೀಸ್‍ನ್ನೆ ನಂಬಿಕೊಂಡಿರುವ ನಮ್ಮ ಬಗ್ಗೆ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಾರೆ ಖಾಸಗಿ ಶಾಲೆಯ ಶಿಕ್ಷಕರಿಗೆ ಸರ್ಕಾರವೇ ವೇತನ ನೀಡಲಿ, ಸರ್ಕಾರಿ ಶಿಕ್ಷಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ನಮಗೂ ನೀಡಿ, ಎಷ್ಟು ಬೇಕಾದಷ್ಟು ಶುಲ್ಕವನ್ನು ವಿನಾಯಿತಿ ಮಾಡಲಿ ಎಂದು ಶಿಕ್ಷಕರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಶಿಕ್ಷಕರು ಭಾಗಿಯಾಗಿದ್ದರು.