Belagavi

ಕೋವಿಡ್ ಟೆಸ್ಟ್ ಗೆ ನೂಕುನುಗ್ಗಲು: ಆಸ್ಪತ್ರೆ ಎದುರು ಸೇನಾ ಭರ್ತಿ ರ‍್ಯಾಲಿಗೆ ಬಂದ ಅಭ್ಯರ್ಥಿಗಳ ಜಾತ್ರೆ

Share

ಬೆಳಗಾವಿಯಲ್ಲಿ ಫೆಬ್ರವರಿ 4 ಮತ್ತು 6ರಂದು ಸೇನಾ ಭರ್ತಿ ರ್ಯಾಲಿ ನಡೆಯಲಿದ್ದು, ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸಾವಿರಾರು ಅಭ್ಯರ್ಥಿಗಳು ಬೆಳಗಾವಿಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಎಲ್ಲ ಅಭ್ಯರ್ಥಿಗಳಿಗೂ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದ್ದು, ಟೆಸ್ಟ್‍ಗೆ ಪ್ರತ್ಯೇಕ, ಸುರಕ್ಷಿತ ವ್ಯವಸ್ಥೆ ಕಲ್ಪಿಸದಿರುವುದು ಚರ್ಚೆಗೂ ಗ್ರಾಸವಾಗಿದೆ. ಒಬ್ಬರ ಮೇಲೊಬ್ಬರು ಮುಗಿಬಿದ್ದು ಕೋವಿಡ್ ಟೆಸ್ಟ್‍ಗೆ ಸರದಿ ಸಾಲು ನಿಂತಿರುವುದು ನಗೆಪಾಟಲೀಗೀಡಾಗಿದೆ.

ಇವರೆಲ್ಲ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬೆಳಗಾವಿಯಲ್ಲಿ ನಡೆಯಲಿರುವ ಸೇನಾ ಭರ್ತಿ ರ್ಯಾಲಿಗೆ ಬಂದಿರುವ ಅಭ್ಯರ್ಥಿಗಳು. ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಹೇಳಿರುವುದರಿಂದ ಸಾಲಿನಲ್ಲಿ ಕೋವಿಡ್ ಟೆಸ್ಟ್ ಸರದಿಗೆ ಕಾಯುತ್ತಿದ್ದಾರೆ. ಒಮ್ಮೆಲೆ ನೂರಾರು ಅಭ್ಯರ್ಥಿಗಳು ಬಂದಿರುವುದರಿಂದ ಆಸ್ಪತ್ರೆ ಎದುರು ನೂಕು ನುಗ್ಗಲು ಉಂಟಾಗಿದೆ. ಟೆಸ್ಟ್‍ಗೆ ಪ್ರತ್ಯೇಕ, ಸುರಕ್ಷಿತ ವ್ಯವಸ್ಥೆ ಕಲ್ಪಿಸದಿರುವುದು, ಕೋವಿಡ್ ಸುರಕ್ಷತೆ ನಿಯಮಗಳ ಅರಿವಿಲ್ಲದೇ ಒಬ್ಬರ ಮೇಲೊಬ್ಬರು ಮುಗಿಬಿದ್ದು, ಮಹಾಮಾರಿ ಕೋವಿಡ್ ಟೆಸ್ಟ್‍ಗೆ ಸರದಿ ಸಾಲು ನಿಂತಿರುವುದು ನಗೆಪಾಟಲೀಗೀಡಾಗಿದೆ.

ಈ ವೇಳೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಿಂದ ಬಂದಿರುವ ಅಭ್ಯರ್ಥಿಯೊಬ್ಬರು ಮಾತನಾಡಿ, ನಸುಕಿನಲ್ಲಿಯೇ ಬೆಳಗಾವಿಗೆ ಬಂದಿದ್ದೇವೆ. ಸರದಿ ಸಾಲಿನಲ್ಲಿ ನಿಂತು ಎರಡೂವರೆ ಗಂಟೆಯಾಯಿತು. ಚೀಟಿ ಮಾಡುವವರೂ ಇಲ್ಲ. ಕೇಳುವವರೂ ಇಲ್ಲ. ನಸುಕಿನ ಜಾವ ಸರದಿಯಲ್ಲಿ ನಿಂತವರಿಗೆ ಮಧ್ಯಾಹ್ನ, ಸಂಜೆಯವರೆಗೂ ಟೆಸ್ಟ್ ಮಾಡುವುದನ್ನು ನೋಡುತ್ತಿದ್ದೇವೆ. ಇದಕ್ಕೊಂದು ಸುರಕ್ಷಿತ ವ್ಯವಸ್ಥೆ ಕಲ್ಪಿಸಿದರೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡದ್ದು ಅರ್ಥಪೂರ್ಣವಾಗುತ್ತದೆ. ಶಿಸ್ತುಬದ್ಧವಾಗಿ ಟೆಸ್ಟ್ ಮಾಡಿದರೆ ಯಾವುದೇ ತಾಪತ್ರಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಅಭ್ಯರ್ಥಿ ಬಸವರಾಜ ಯರಗಟ್ಟಿ ಮಾತನಾಡಿ, ಆರು ಗಂಟೆಯಿಂದ ಕ್ಯೂನಲ್ಲಿ ನಿಂತಿದ್ದೆ. ಈಗ ಟೆಸ್ಟ್ ಮಾಡಿದ್ದಾರೆ. ಇನ್ನೂ ಪ್ರೊಸಿಜರ್ ಮುಗಿದಿಲ್ಲ. ಒಪಿಡಿಯಲ್ಲಿ ಇನ್ನೂ ಎರಡು ಕಡೆ ಟೆಸ್ಟ್ ಇದೆ. ಕೋವಿಡ್‍ನಂತಹ ರೋಗದ ಪರೀಕ್ಷೆ ಮಾಡುವಾಗ ಸರದಿ ಸಾಲಿನಲ್ಲಿ ಸುರಕ್ಷತೆ ಕಲ್ಪಿಸಬೇಕಾಗಿತ್ತು. ಅದು ಆಗಿಲ್ಲ ಎಂದರು.

ಒಟ್ಟಿನಲ್ಲಿ ಕೋವಿಡ್ ಟೆಸ್ಟ್ ಹೆಸರಲ್ಲಿ ಆಸ್ಪತ್ರೆ ಎದುರು ಜಾತ್ರೆ ಏರ್ಪಾಟು ಮಾಡಿದ ಸೇನಾ ಭರ್ತಿ ರ್ಯಾಲಿ ಸಂಘಟಕರ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

Tags:

error: Content is protected !!