Belagavi

ಕಾಳಸಂತೆಗೆ ಅಕ್ಕಿ ಸಾಗಾಟ..ನಕಲಿ ಪಡಿತರ ಚೀಟಿ ರದ್ಧತಿಗೆ ಕಠಿಣ ಕ್ರಮ..ಸಚಿವ ಉಮೇಶ ಕತ್ತಿ

Share

ರಾಜ್ಯದಲ್ಲಿ ಅನಧಿಕೃತ ಪಡಿತರ ಚೀಟಿ ರದ್ಧತಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನಧಿಕೃತ ಪಡಿತರ ರದ್ಧತಿ ಸಂಬಂಧ ಬೆಳಗಾವಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.

: ಬೆಳಗಾವಿ ಡಿಸಿ ಕಚೇರಿಯಲ್ಲಿ ಶನಿವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಉಮೇಶ ಕತ್ತಿ ಅವರು ತಹಶೀಲ್ದಾರ್, ಪಿಡಿಒ ಒಳಗೊಂಡ ಸಮಿತಿ ರಚಿಸಿ ಸರ್ವೆ ಮಾಡಲಾಗುವುದು ಮಾರ್ಚ್ 31ರೊಳಗೆ ಅನಧಿಕೃತ ಕಾರ್ಡ್‍ಗಳ ವರದಿ ಕೈ ಸೇರಲಿದೆ. ಬಳಿಕ ಅನಧಿಕೃತ ಪಡಿತರ ಚೀಟಿ ರದ್ಧುಗೊಳಿಸಲಾಗುವುದು. ಒಂದು ವೇಳೆ ಅನಧಿಕೃತ ಪಡಿತರ ಪತ್ತೆ ಸಮರ್ಪಕವಾಗದಿದ್ರೆ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇನ್ನು ಆಹಾರ ಭದ್ರತೆ ಯೋಜನೆಯಡಿ ಸ್ಥಳೀಯ ಆಹಾರ ವಿತರಣೆಗೆ ಆಧ್ಯತೆ ನೀಡಲಾಗುವುದು. ಉತ್ತರ ಕರ್ನಾಟಕದಲ್ಲಿ ಅಕ್ಕಿ ಜೊತೆಗೆ ಜೋಳ, ಕಡಲೆ, ಹೆಸರು ಬೇಳೆ ವಿತರಿಸಲಾಗುವುದು. ಅದೇ ರೀತಿ ದಕ್ಷಿಣ ಕರ್ನಾಟಕದಲ್ಲಿ ಅಕ್ಕಿ, ರಾಗಿ, ಕಡಲೆ, ಹೆಸರು ಬೇಳೆ ವಿತರಿಸಲಾಗುವುದು. ಎಪ್ರಿಲ್ 1ರಿಂದ ಈ ಯೋಜನೆ ಜಾರಿಗೆ ತರಲು ಯೋಜಿಸಲಾಗಿದೆ. ಈ ಸಂಬಂಧ ಕೇಂದ್ರದ ಆಹಾರ ನಾಗರಿಕ ಸರಬರಾಜು ಸಚಿವರ ಜೊತೆಗೆ ಚರ್ಚಿಸಲಾಗುವುದು. ಇದಕ್ಕೆ ಕೇಂದ್ರ ಸಚಿವರು ಅನುಮತಿ ನೀಡುವ ವಿಶ್ವಾಸವಿದೆ ಎಂದು ಇದೇ ವೇಳೆ ಸಚಿವ ಉಮೇಶ ಕತ್ತಿ ಹೇಳಿದರು.

ಪ್ರತಿವರ್ಷ ಪಂಜಾಬ್‍ನಿಂದ ಅಕ್ಕಿ ರಾಜ್ಯಕ್ಕೆ ಸರಬರಾಜು ಆಗುತ್ತಿತ್ತು. ಆದರೆ ಕರ್ನಾಟಕದಲ್ಲಿಯೇ ಸಾಕಷ್ಟು ಭತ್ತ ಬೆಳೆಯುತ್ತಿದ್ದು, ಇಲ್ಲೇ ಖರೀದಿಸುವ ಯೋಜನೆ ಇದೆ. ಇದರಿಂದ ಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಬಹುದು. ಕಾಳಸಂತೆಗೆ ಅಕ್ಕಿ ಸಾಗಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಚಿವ ಉಮೇಶ ಕತ್ತಿ ಖಡಕ್ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಉತ್ತರ ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

 

Tags:

error: Content is protected !!