ಕಾಗವಾಡದಲ್ಲಿ ಶನಿವಾರ ಮತ್ತು ರವಿವಾರ 2 ದಿನ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಜರುಗಿತು. ಸಮ್ಮೇಳಾಧ್ಯಕ್ಷ ಡಾ. ಪ್ರಭಾಕರ ಕೋರೆ, ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ, ಅಥಣಿ ತಾಲೂಕಾಧ್ಯಕ್ಷ ಡಾ. ಮಹಾಂತೇಶ ಉಕಲಿ, ಕಾಗವಾಡ ತಾಲೂಕಾಧ್ಯಕ್ಷ ಡಾ. ಸಿದ್ದಗೌಡ ಕಾಗೆ ಎಲ್ಲ ಸಾಹಿತ್ಯಪ್ರೇಮಿಗಳು, ಕನ್ನಡ ಅಭಿಮಾನಿಗಳು, ಕರವೇ ಕಾರ್ಯಕರ್ತರು ಎರಡು ದಿನ ಶ್ರಮಿಸಿ ಪ್ರಥಮ ಬಾರಿಗೆ ಕಾಗವಾಡದಲ್ಲಿ ಸಮ್ಮೇಳನ ಯಶಸ್ವಿಗೊಳಿಸಿದರು.
ಸತ್ಯವಾದ ಸಾಹಿತ್ಯ ಬರೆಯಲು ನಮಗೆ ಆಗುತ್ತಿಲ್ಲ. ಬರೆಯಬೇಕೆಂಬ ಮನಸ್ಸಿದ್ದರೂ ಹಿಂಜರಿಕೆ ಸಾಹಿತ್ಯ ಬರವಣಿಗೆ ನಮ್ಮನ್ನು ಕಾಡುತ್ತಿದೆ. ಮನಸ್ಸು ಬಿಚ್ಚಿ ಬರೆಯುವ ಶಕ್ತಿ ನಮ್ಮಲ್ಲಿಲ್ಲ ಎಂದು ಮಾಜಿ ಸಚಿವೆ, ಸಾಹಿತಿ ಲೀಲಾದೇವಿ ಆರ್. ಪ್ರಸಾದ್ ಅಭಿಪ್ರಾಯಪಟ್ಟರು.
ಮಲ್ಲಿಕಾರ್ಜುನ ವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ರವಿವಾರ ಮಹಿಳಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮ್ಮೇಳನದಲ್ಲಿ ತೆಗೆದುಕೊಂಡ ನಿಯಮಗಳು ಈ ರೀತಿಯಿವೆ:
1) ನಂಜುಂಡಪ್ಪಾ ವರದಿಗೆ ಸಂಬಂಧಿಸಿದಂತೆ ಸಮಗ್ರ ನೀರಾವರಿ, ಮೂಲಭೂತ ಸೌಕರ್ಯ, ರೈಲುಮಾರ್ಗ, ನದಿ ನೀರು ಹಂಚಿಕೆ ಸಂಪೂರ್ಣ ಅನುಷ್ಠಾನ ಆಗಬೇಕು.
2) ಗಡಿಭಾಗದ ಶಾಲೆಗಳನ್ನು ಮುಚ್ಚಬಾರದು, ಅಲ್ಲದೇ ಇತರ ಭಾಷೆಗಳ ಶಾಲೆಗಳ ಆರಂಭಕ್ಕೆ ಅನುಮತಿ ನೀಡದೇ, ಗಡಿಭಾಗದ ಕನ್ನಡದ ಮಾಧ್ಯಮ ಶಾಲೆಗಳ ಕಟ್ಟಡಗಳ ಮೊದಲಾಗಿ ಸಂಪೂರ್ಣ ಅಭಿವೃದ್ಧಿಯನ್ನು ಮಾಡಬೇಕು. ಗುಣಾತ್ಮಕ ಶಿಕ್ಷಣ ಕೊಡುವ ವ್ಯವಸ್ಥೆ ಆಗಬೇಕು. ನೀರು, ಮೈದಾನ, ಶೌಚಾಲಯ ವ್ಯವಸ್ಥಿತ ಕಲ್ಪಿಸಬೇಕು.
3) ಗಡಿಭಾಗದ ಹಳ್ಳಿಗಳಲ್ಲಿ ವಾಚನಾಲಯ ಸ್ಥಾಪನೆ ಆಗಲಿ.
4) ಸುವರ್ಣಸೌಧದ ಸಮರ್ಪಕ ಬಳಕೆಗಾಗಿ ಮತ್ತು ಅಧಿಕಾರದ ಸಮತೋಲನಕ್ಕೆ ಮಹತ್ವದ ಇಲಾಖೆಗಳು ತಕ್ಷಣ ಸ್ಥಳಾಂತರವಾಗಬೇಕು ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಬೇಕು.
5) ನೀಟ್ ಪರೀಕ್ಷೆ ಒಂದಾಗಿನಿಂದ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಲ್ಲಿ ಪ್ರವೇಶ ಸಿಗುತ್ತಿಲ್ಲ ಅನ್ಯಾಯ ಸರಿದೊಗಿಸಬೇಕು. ಕನ್ನಡ ಮಾಧ್ಯಮದವರಿಗೆ ಮೀಸಲಾತಿ ಇಡಬೇಕು.
6) ವಿದ್ಯುತ್ ನಿಗಮಗಳಾದ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂ ಬದಲು ಕನ್ನಡ ಪದಗಳ ಬಳಕೆಯಾಗಲಿ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಬದಲು “ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ” ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬದಲು “ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ” ಎಂದು ಬದಲಾಗಬೇಕು.
7) ಸೊಲ್ಲಾಪೂರ, ಜತ್ತ, ಅಕ್ಕಲಕೋಟ, ಕಾಸರಗೋಡು, ಸೇರಿದಂತೆ ರಾಜ್ಯದಿಂದ ಹೊರಗುಳಿದ ಕನ್ನಡದ ಭಾಗಗಳು ಕರ್ನಾಟಕಕ್ಕೆ ಸೇರಬೇಕು.
8) ವಿಧಾನ ಮಂಡಳ ಅಧಿವೇಶನ ಚಳಿಗಾಲ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಪ್ರತಿವರ್ಷ ಆಗಲಿ ಹಾಗೂ ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸಬೇಕು.
ಕೈಗೊಂಡ ಠರಾವುಗಳು
1) ಕಾಗವಾಡ ತಾಲೂಕು ಕೇಂದ್ರದಲ್ಲಿ ಶೀಘ್ರ ಎಲ್ಲಾ ತಾಲೂಕಾ ಸರಕಾರಿ ಕಚೇರಿಗಳನ್ನು ಸ್ವಂತ ಕಟ್ಟಡಗಳಲ್ಲಿ ಸ್ಥಾಪಿಸುವದು.
2) ಗಡಿ ಪ್ರದೇಶದಲ್ಲಿರುವ ಕನ್ನಡ ಶಾಲೆಗಳನ್ನು ಬಲಪಡಿಸುವುದು.
3) ಕಾಗವಾಡದಲ್ಲಿ ಸರಕಾರಿ ಪ್ರೌಢ ಶಾಲೆ, ಕಾಲೇಜು, ಮಹಿಳಾ ಕಾಲೇಜು, ತಾಂತ್ರಿಕ ಶಿಕ್ಷಣ ಕಾಲೇಜುಗಳನ್ನು ಸ್ಥಾಪಿಸುವದು.
4) ಕಾಗವಾಡದ ಕೃಷಿ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸುವುದು.
5) ಕಾಗವಾಡದಲ್ಲಿ ಭವ್ಯವಾದ ಕನ್ನಡ ಭವನ ನಿರ್ಮಿಸುವದು.
6) ಮಹಾಜನ ವರದಿ ಜಾರಿಯಾಗಬೇಕು
ಅತಿಥಿಗಳಾಗಿ ಮಾಜಿ ಶಾಸಕ ಕಲ್ಲಪ್ಪಣ್ಣ ಮಗ್ಗೆಣ್ಣವರ ಆಗಮಿಸಿದ್ದರು. ಸಮಾರಂಭದ ಸಾನ್ನಿಧ್ಯ ಡಾ. ಅಭಿನವ ಬ್ರಹ್ಮಾನಂದ ಸ್ವಾಮೀಜಿ ವಹಿಸಿದ್ದರು. ಈ ವೇಳೆ ಜಿಲ್ಲಾ ಕ.ಸಾ.ಪ ಅಧ್ಯಕ್ಷೆ ಶ್ರೀಮತಿ ಮಂಗಲಾತಾಯಿ ಮೆಟಗುಡ್ಡ, ಅಥಣಿ ತಾಲೂಕಾಧ್ಯಕ್ಷ ಡಾ. ಮಹಾಂತೇಶ ಉಕಲಿ, ಕಾಗವಾಡ ತಾಲೂಕಾಧ್ಯಕ್ಷ ಡಾ. ಸಿದ್ದಗೌಡ ಕಾಗೆ, ಡಾ. ಎಸ್.ಓ.ಹಲಸಗಿ, ಪ್ರಾಚಾರ್ಯ ಬಿ.ಎ.ಪಾಟೀಲ, ಸಿ.ವ್ಹಿ.ದೊಡ್ಡಗೌಡರ, ವ್ಹಿ.ವ್ಹಿ.ಬುರಲಿ, ಸೇರಿದಂತೆ ಅನೇಕರು ಇದ್ದರು.
ಮುಂದಿನ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಚಿಕ್ಕೋಡಿಯಲ್ಲಿ: ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಡಾ. ಪ್ರಭಾಕರ ಕೋರೆ ಇವರ ನೇತೃತ್ವದಲ್ಲಿ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಇವರು ಬರುವ ವರ್ಷದ ಜಿಲ್ಲಾ ಸಾಹಿತ್ಯ ಸಮ್ಮೇಳನ ಚಿಕ್ಕೋಡಿಯಲ್ಲಿ ಜರುಗಲಿದೆ ಎಂದು ಘೋಷಣೆ ಮಾಡಿ ಚಿಕ್ಕೋಡಿ ಅಧ್ಯಕ್ಷ ಶ್ರೀಪಾದ ಕುಂಬಾರ ಇವರಿಗೆ ಸನ್ಮಾನ ಮಾಡಿದರು.
ಕಾಗವಾಡದ ಕನ್ನಡ ಅಭಿಮಾನಿಗಳು, ಕರವೇ ಕಾರ್ಯಕರ್ತರು ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದ್ದರಿಂದ ಡಾ. ಪ್ರಭಾಕರ ಕೋರೆ ಮತ್ತು ಡಾ. ಸಿದ್ದಗೌಡ ಕಾಗೆ ಇವರನ್ನು ಸನ್ಮಾನಿಸಿದರು. ಕನ್ನಡದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.