Politics

ಕಸಾಪ ಚುನಾವಣೆಗೆ ಡೇಟ್ ಫಿಕ್ಸ್..ಮೇ 9ಕ್ಕೆ ವೋಟಿಂಗ್..ಮೇ 12ಕ್ಕೆ ರಿಸಲ್ಟ್

Share

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಮೇ 9ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಚುನಾವಣೆ ರಂಗು ಪಡೆದುಕೊಂಡಿದ್ದು. ಆಕಾಂಕ್ಷಿಗಳು ತಮ್ಮ ಮತಬೇಟೆಗೆ ಸಜ್ಜಾಗುತ್ತಿದ್ದಾರೆ.

ನಿನ್ನೆ ಚುನಾವಣಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಕನ್ನಡ ಸಾಹಿತ್ಯ ಪರಿಷತ್‍ಗೆ ಚುನಾವಣೆಯನ್ನು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ಇತ್ತ ಆಕಾಂಕ್ಷಿಗಳು ತಮ್ಮ ಪ್ರಚಾರ ಕಾರ್ಯವನ್ನು ಮತ್ತಷ್ಟು ಬಿರುಸುಗೊಳಿಸಿದ್ದಾರೆ. ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ದೂರದರ್ಶನ ನಿವೃತ್ತ ಅಧಿಕಾರಿ ಡಾ.ಮಹೇಶ್ ಜೋಷಿ, ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡ, ಸಿ.ಕೆ.ರಾಮೇಗೌಡ, ಕೊಪ್ಪಳ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ್ ಮಾಲಿಪಾಟೀಲ್ ಸೇರಿದಂತೆ ಹಲವರು ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಒಟ್ಟು 3,10,520 ಮತದಾರರು ರಾಜ್ಯವಾರು ಮತದಾನದ ಹಕ್ಕು ಪಡೆದಿದ್ದಾರೆ. ಈ ಮತದಾರರ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಜಿಲ್ಲಾವಾರು ಪ್ರವಾಸ ನಡೆಸಿ ಹಾಲಿ ಜಿಲ್ಲಾಧ್ಯಕ್ಷರು, ಜಿಲ್ಲಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳನ್ನು ಭೇಟಿ ಮಾಡಿ ತಮ್ಮ ಗೆಲುವಿಗೆ ಶ್ರಮಿಸುತ್ತಿದ್ದಾರೆ.

2021ರ ಮೇ 9ಕ್ಕೆ ಮತದಾನ ನಡೆಯಲಿದ್ದು, ಮೇ 12ರಂದು ಫಲಿತಾಂಶ ಪ್ರಕಟವಾಗಲಿದೆ. ಕಸಾಪ ಸುಧಾರಣಾ ಸಲಹಾ ಸಮಿತಿ, ಹಾಲಿ ಸದಸ್ಯರಾದ ಎಸ್.ಟಿ.ಮೋಹನ್‍ರಾಜ್ ಅವರನ್ನು ವಿಶೇಷ ಚುನಾವಣಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಪರಿಷತ್‍ನ ನಿಬಂಧನೆಗಳಂತೆ ಚುನಾವಣಾ ಅಧಿಸೂಚನೆ ಹಾಗೂ ಚುನಾವಣೆಗೆ ಅರ್ಹರಿರುವ ಕರಡು ಮತದಾರರ ಪಟ್ಟಿಯನ್ನು ಇಂದು ಕೇಂದ್ರ ಕಚೇರಿ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ಪ್ರಕಟಿಸಲಾಗುತ್ತಿದ್ದು, ಆಕ್ಷೇಪಗಳಿದ್ದರೆ ಫೆ.22ರವರೆಗೆ ಸಲ್ಲಿಸಲು ಸೂಚಿಸಲಾಗಿದೆ. ಮಾ.25ಕ್ಕೆ ಅಂತಿಮ ಪಟ್ಟಿ ಪ್ರಕಟವಾಗಲಿದೆ.

Tags:

error: Content is protected !!