ವೈಶ್ಯವಾಣಿ ಸಮಾಜಕ್ಕೆ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕು. ಎಲ್ಲ ರೀರಿಯಿಂದಲೂ ಹಿಂದುಳಿದ ವೈಶ್ಯ ಸಮಾಜಕ್ಕೆ ಸರಕಾರದ ಸವಲತ್ತು ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
: ವೈಶ್ಯವಾಣಿ ಸಮಾಜ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ದೃಷ್ಟಿಯಿಂದ ತೀರ ಹಿಂದುಳಿದಿದೆ. ಈ ಸಮಾಜಕ್ಕೆ ಸರಕಾರದ ಯಾವ ಸೌಲಭ್ಯಗಳೂ ದೊರೆಯುತ್ತಿಲ್ಲ. ಸಮಾಜದ ಹೆಚ್ಚಿನ ಜನರು ತೀರ ಬಡವರಾಗಿದ್ದು, ಎಲ್ಲ ದೃಷ್ಟಿಯಿಂದಲೂ ಹಿಂದುಳಿದಿದ್ದಾರೆ. ಅವರಿಗೆ ಸರಕಾರದ ಸವಲತ್ತು ದೊರಕಿಸಿಕೊಡಲು ಶೀಘ್ರ ಕ್ರಮ ಕೈಗೊಳ್ಳಬೇಕು. ವೈಶ್ಯ ಸಮಾಜವನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ವೈಶ್ಯವಾಣಿ ಸಮಾಜದ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಸರಕಾರಕ್ಕೆ ಮನವಿ ಸಲ್ಲಿಸಿದರು. ನ್ಯಾಯ ಬೇಕು ಎಂದು ಘೋಷಣೆ ಕೂಗಿ ಬೇಡಿಕೆ ಮಂಡಿಸಿದರು.
ಈ ವೇಳೆ ವೈಶ್ಯವಾಣಿ ಸಮಾಜದ ಮುಖಂಡ ರೋಹನ್ ಜವಳಿ ಮಾತನಾಡಿ, ವೈಶ್ಯವಾಣಿ ಸಮಾಜ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಹೀಗೆ ಎಲ್ಲ ರಂಗಗಳಲ್ಲೂ ಹಿಂದುಳಿದಿದೆ. ಸಮಾಜದ ಹೆಚ್ಚಿನ ಜನರು ಯಾವುದೇ ಸವಲತ್ತು ಇಲ್ಲದೇ ಹಿಂದುಳಿಯುತ್ತಲೇ ನಡೆದಿದ್ದಾರೆ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ವೈಶ್ಯ ಸಮಾಜದ ಜನರನ್ನು ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಕರ್ನಾಟಕ ಸರಕಾರವೂ ಸಹ ವೈಶ್ಯವಾಣಿ ಸಮಾಜದ ಪ್ರಗತಿಗೆ ಹಿಂದುಳಿದ ವರ್ಗದಲ್ಲಿ ಸೇರಿಸಿ ಸವಲತ್ತು ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ವೈಶ್ಯವಾಣಿ ಸಮಾಜದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.