ಕುರುಬರಿಗೆ ಎಸ್.ಟಿ. ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಂಗಳೂರಿನ ಮಾದಾವರ ಬಳಿ ಇಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪಾದಯಾತ್ರೆ ನಡೆಸಿದ ನಂತರ ನಡೆದ ಬೃಹತ್ ಸಮಾವೇಶ ಇದಾಗಿದ್ದು, ಸಮಾವೇಶಕ್ಕೆ ಜನಸಾಗರವೇ ಹರಿದು ಬಂದಿದೆ.
ಬೆಂಗಳೂರಿನ ಮಾದಾವರ ಸಮೀಪದ ಬಿಐಇಸಿಯಲ್ಲಿ ಕಾಗಿನೆಲೆ ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಕುರುಬ ಸಮಾಜದ ಸಮಾವೇಶದಲ್ಲಿ ರಾಜ್ಯದ ವಿವಿಧ ಕಡೆಯಿಂದ ಆಗಮಿಸಿರುವ ಲಕ್ಷಾಂತರ ಜನ ಪಾಲ್ಗೊಂಡಿದ್ದಾರೆ. ಕುರುಬ ಸಮುದಾಯದ ರಾಜಕಾರಣಿಗಳು, ಮಠಾಧೀಶರು ಪಾಲ್ಗೊಂಡಿದ್ದಾರೆ. ಕುರುಬ ಸಮುದಾಯಕ್ಕೆ ಎಸ್‍ಟಿ ಮೀಸಲಿಗೆ ಆಗ್ರಹಿಸಿ ಕಾಗಿನೆಲೆಯಿಂದ ಬೆಂಗಳೂರಿಗೆ ಜನವರಿ 15 ರಂದು ಶ್ರೀಗಳು ಪಾದಯಾತ್ರೆ ಆರಂಭಿಸಿದ್ದರು. ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಜನವರಿ 15 ರಂದು ಪಾದಯಾತ್ರೆ ಸಮಾರೋಪಗೊಂಡಿತ್ತು. ಪಾದಯಾತ್ರೆ ನಡೆಸಿದ ನಂತರ ಇಂದು ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಈ ವೇಳೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಮಾತನಾಡಿ, ಕುರುವ ಸಮುದಾಯ ಎಲ್ಲ ರೀತಿಯಿಂದಲೂ ಹಿಂದುಳಿದಿದೆ. ಹಿಂದುಳಿದ ಸಮಾಜಕ್ಕೆ ಮೀಸಲಾತಿ ನೀಡುವುದು ಸಂವಿಧಾನಬದ್ಧ ಕರ್ತವ್ಯವಾಗಿದೆ. ಮೀಸಲಾತಿ ಕೇಳುವುದು ನಮ್ಮ ಹಕ್ಕಾಗಿದೆ. ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಕುರುಬ ಸಮುದಾಯ ಇನ್ನೂ ಬಹಳಷ್ಟು ಬೆಳವಣಿಗೆ ಆಗಬೇಕಿದೆ. ಆಳುವ ಸರಕಾರಗಳನ್ನು ಎಚ್ಚರಿಸಲು ನಮ್ಮ ಸಂಘಟನೆ ಶಕ್ತಿಯನ್ನು ತೋರಿಸುವುದು ಅನಿವಾರ್ಯವಾಗಿದೆ ಎಂದರು.
ಕಾಗಿನೆಲೆ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವ ಎಂಟಿಬಿ ನಾಗರಾಜ, ಸಚಿವ ಶಂಕರ್, ಶಾಸಕ ಬಂಡೆಪ್ಪ ಕಾಶೆಂಪುರ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.