ರಾಜ್ಯದಲ್ಲಿ ಕೆಲವೊಂದು ಬಲಿಷ್ಠ ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿವೆ. ಅದೇ ರೀತಿ ಯಾವುದೇ ಬುಡಕಟ್ಟು ಲಕ್ಷಣಗಳು ಇಲ್ಲದೇ ಇದ್ದರೂ ಕೂಡ ಎಸ್‍ಟಿಗೆ ಸೇರಿಸುವಂತೆ ಹೋರಾಟ ಮಾಡುತ್ತಿರುವುದು ಖಂಡನಾರ್ಹ ಮತ್ತು ಆತಂಕದ ಸುದ್ದಿ ಎಂದು ಚಿಕ್ಕಬಳ್ಳಾಪುರದ ವಾಲ್ಮೀಕಿ ಗುರುಪೀಠದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
: ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ ವತಿಯಿಂದ ಬೆಳಗಾವಿ ಮಹಾಂತೇಶ್ ನಗರದ ವಾಲ್ಮೀಕಿ ನೌಕರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ ಅನ್ಯ ಜಾತಿಯವರನ್ನು ಎಸ್‍ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ಜನವರಿ 8ರಂದು ಹೋರಾಟ ಮಾಡಿದ್ದೇವು ಈ ವೇಳೆ ಸಿಎಂ ಅವರಿಗೆ ಮನವಿ ಕೂಡ ಸಲ್ಲಿಸಿದ್ದೇವೆ. ಹೀಗಾಗಿ ಈ ಸಂಬಂಧ ಪ್ರತಿ ಜಿಲ್ಲೆಗಳಲ್ಲಿ ಜಾಗೃತಿ ಸಮಾವೇಶ ನಡೆಸಲು ತೀರ್ಮಾನಿಸಿದ್ದೇವೆ. ಬೆಳಗಾವಿ ಜಿಲ್ಲೆಯಲ್ಲಿಯೇ ಮೊದಲ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಇನ್ನು ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಕೊಡಬೇಕು ಎಂದು 1950ರಲ್ಲಿಯೇ ಸಂವಿಧಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಘೋಷಣೆ ಮಾಡಿದ್ದರು. ಆದರೆ 2008ರಲ್ಲಿ ಕೇಂದ್ರ ಸರ್ಕಾರ ಅದನ್ನು ಜಾರಿಗೆ ತಂದಿತು. ಆದ್ರೆ ರಾಜ್ಯ ಸರ್ಕಾರ ಇದುವರೆಗೂ ಜಾರಿಗೆ ತಂದಿಲ್ಲ. 2016ರಿಂದ ಹೋರಾಟ ಮಾಡುತ್ತಾ ಬಂದಿದ್ದರಿಂದ ನ್ಯಾ.ನಾಗಮೋಹನ್‍ದಾಸ್ ನೇತೃತ್ವದ ಆಯೋಗ ರಚನೆ ಮಾಡಿದ್ದರು. ಈ ವೇಳೆ ಆಯೋಗ ವರದಿ ಸಲ್ಲಿಸಿದರೂ ಕೂಡ ಮೀಸಲಾತಿ ಹೆಚ್ಚಿಸದೇ ಸಂಪುಟ ಉಪ ಸಮಿತಿ ರಚನೆ ಮಾಡಿ ವಿನಾಕಾರಣ ಕಾಲಹರಣ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಕಿಡಿಕಾರಿದರು.
: ಈ ವೇಳೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಮೋಹನ್ ಕಿಶೋರ್, ಗೌರವಾಧ್ಯಕ್ಷ ಸಿದರಾಯಿ ಶೀಗಿಹಳ್ಳಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಎಸ್.ಮೂಕನವರ, ರಾಜ್ಯ ಯುವ ಘಟಕದ ಅಧ್ಯಕ್ಷ ಮಹೇಶ ಶೀಗಿಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.