Banglore

ಎಸ್‍ಟಿ ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಕುರುಬ ಸಮಾಜದ ಶಕ್ತಿ ಪ್ರದರ್ಶನ

Share

ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಕುರುಬ ಸಮುದಾಯದವರು ಇಂದು ಬೃಹತ್ ಸಮಾವೇಶ ನಡೆಸಿ ವಿರಾಟ ಪ್ರದರ್ಶನ ತೋರ್ಪಡಿಸಿದರು. ಕುರುಬ ಸಮುದಾಯವನ್ನು ಎಸ್ ಟಿ ಪಟ್ಟಿಗೆ ಸೇರಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

ಕಾಗಿನೆಲೆಯ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಜನವರಿ 15ರಂದು ಕಾಗಿನೆಲೆಯಿಂದ ಪಾದಯಾತ್ರೆ ಹೊರಟ ಕುರುಬ ಸಮುದಾಯದ ಮುಖಂಡರು ಮತ್ತು ಕಾರ್ಯಕರ್ತರು ನಿನ್ನೆಯಷ್ಟೇ ಬೆಂಗಳೂರು ತಲುಪಿದರು. ಇಂದು ತುಮಕೂರು ರಸ್ತೆ ಮಾದನಾಯಕನ ಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶಿಸಿದರು.

ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಸಚಿವರಾದ ಎಂಟಿಬಿ ನಾಗರಾಜ್, ಆರ್.ಶಂಕರ್, ಭೈರತಿ ಬಸವರಾಜ್, ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಚ್.ಎಂ.ರೇವಣ್ಣ, ಬಂಡೆಪ್ಪ ಕಾಶಂಪುರ್, ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ, ಕೆ.ಜಿ.ಕಾಂತೇಶ್, ಟಿ.ಬಿ.ಬಳಿಗಾವಿ, ಸೋಮಶೇಖರ್, ಆನೇಕಲ್ ದೊಡ್ಡಯ್ಯ, ಮಾಜಿ ಮೇಯರ್ ವೆಂಕಟೇಶಮೂರ್ತಿ ಮತ್ತಿತರ ರಾಜಕೀಯ ಮುಖಂಡರು, ಸಮುದಾಯದ ಮುಖಂಡರು ಸಮಾವೇಶದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಾಲ್ಕು ಜಿಲ್ಲೆಗಳಲ್ಲಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿರುವ ನಮ್ಮ ಸಮುದಾಯದವರನ್ನು ಎಸ್ಟಿಗೆ ಸೇರಿಸಬೇಕೆಂಬ ಆಗ್ರಹ ನಮ್ಮದಾಗಿದೆ. ಮೀಸಲಾತಿ ವಿಚಾರದಲ್ಲಿ ಸಿಎಂ ಹೇಳಿಕೆ ಸರಿಯಾಗಿದೆ.

ಸಚಿವನಾಗಿ ನಾನು ಸರ್ಕಾರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಮೀಸಲಾತಿ ಪ್ರಕ್ರಿಯೆ ನಿಯಮಬದ್ಧವಾಗಿ ನಡೆಯಬೇಕು. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಸಂಬಂಧ ಸಂಪುಟದಲ್ಲಿ ಚರ್ಚಿಸಿ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳುಹಿಸಲಾಗುವುದು. ನಮ್ಮ ಹಕ್ಕೊತ್ತಾಯ ಮಂಡಿಸಲು ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಮ್ಮ ಬೇಡಿಕೆಯನ್ನು ಈಡೇರಿಸಲಿವೆ ಎಂದರು.

ಕಾಗಿನೆಲೆ ಪೀಠಾಧ್ಯಕ್ಷ ನಿರಂಜನಾಪುರಿ ಸ್ವಾಮೀಜಿ ಮಾತನಾಡಿ, ಕಾಗಿನೆಲೆಯಿಂದ ಬೆಂಗಳೂರುವರೆಗೆ 340 ಕಿ.ಮೀ ಪಾದಯಾತ್ರೆ ನಡೆಸಿದ್ದೇವೆ. ಪಾದಯಾತ್ರೆ ಸಂದರ್ಭದಲ್ಲಿ ನಮಗೆ ಜಾತ್ಯತೀತ ಬೆಂಬಲ ಸಿಕ್ಕಿದೆ. ಅಭೂತಪೂರ್ವ ಸಮಾವೇಶ ಕಂಡು ಸಂತಸವಾಗಿದೆ. ಈ ಶಕ್ತಿ ಪ್ರದರ್ಶನ ನಮ್ಮ ಬೇಡಿಕೆ ಈಡೇರಿಕೆಯ ಸಾಧನವಾಗಿದೆ. ಸಮುದಾಯಕ್ಕೆ ಎಸ್ಟಿ ಸೌಲಭ್ಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂಬ ಬೇಡಿಕೆ ಹೊಸದೇನಲ್ಲ. ಈಗಾಗಲೇ ಕಾಡುಕುರುಬ, ಜೇನುಕುರುಬ ಸೇರಿದಂತೆ ಅನೇಕ ನಮ್ಮ ಸಮುದಾಯದವರನ್ನು ಎಸ್ಟಿಗೆ ಸೇರಿಸಲಾಗಿದೆ. ಅಖಂಡ ಕರ್ನಾಟಕದ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು ನಾವು ಆಗ್ರಹಪಡಿಸಿದ್ದೇವೆ ಎಂದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಮಾತನಾಡಿ, ಕುರುವ ಸಮುದಾಯ ಎಲ್ಲ ರೀತಿಯಿಂದಲೂ ಹಿಂದುಳಿದಿದೆ. ಹಿಂದುಳಿದ ಸಮಾಜಕ್ಕೆ ಮೀಸಲಾತಿ ನೀಡುವುದು ಸಂವಿಧಾನಬದ್ಧ ಕರ್ತವ್ಯವಾಗಿದೆ. ಮೀಸಲಾತಿ ಕೇಳುವುದು ನಮ್ಮ ಹಕ್ಕಾಗಿದೆ. ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಕುರುಬ ಸಮುದಾಯ ಇನ್ನೂ ಬಹಳಷ್ಟು ಬೆಳವಣಿಗೆ ಆಗಬೇಕಿದೆ. ಆಳುವ ಸರಕಾರಗಳನ್ನು ಎಚ್ಚರಿಸಲು ನಮ್ಮ ಸಂಘಟನೆ ಶಕ್ತಿಯನ್ನು ತೋರಿಸುವುದು ಅನಿವಾರ್ಯವಾಗಿದೆ ಎಂದರು.

ಈ ವೇಳೆ ಕುರುಬ ಸಮಾಜದ ಮುಖಂಡರಾದ ಎಚ್.ಎಂ.ರೇವಣ್ಣ, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್ ಮತ್ತಿತರರು ಪಾಲ್ಗೊಂಡಿದ್ದರು.

Tags:

error: Content is protected !!