ಕೊರೋನಾ ಸಂಕಷ್ಟದಲ್ಲಿರುವ ದೇಶದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 2021-22ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು. ಆರೋಗ್ಯ, ಆತ್ಮನಿರ್ಭರ ಭಾರತ, ಕೋವಿಡ್ ಲಸಿಕೆಯನ್ನು ಗಮನದಲ್ಲಿರಿಸಿ ಹಲವು ಸುಧಾರಣೆ ಕ್ರಮಗಳನ್ನು ಲಕ್ಷ್ಯದಲ್ಲಿರಿಸಿ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ದೇಶದ ಗಮನ ಸೆಳೆದಿದೆ.

ಈ ಬಾರಿ ಕೇಂದ್ರ ಬಜೆಟ್‍ನಲ್ಲಿ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳ ಯೋಜನೆಗಳಿಗೆ ಆದ್ಯತೆ ನೀಡಲಾಗಿದ್ದು, ಆತ್ಮನಿರ್ಭರ ಭಾರತಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇಂದ್ರ ಸರಕಾರದ ಸ್ವಾಮಿತ್ವದಲ್ಲಿರುವ ಉದ್ಯಮಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒತ್ತು ನೀಡಲಾಗಿದೆ. ರೈತರ ಆದಾಯ ಐದು ಪಟ್ಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಕೃಷಿವಲಯ ಚೇತರಿಕೆಗೆ ಕೇಂದ್ರದಿಂದ ಹೊಸ ಯೋಜನೆ ರೂಪಿಸಲಾಗಿದೆ. ಪಶುಪಾಲನೆ, ಹೈನುಗಾರಿಕೆ ಕುಕ್ಕುಟೋದ್ಯಮಕ್ಕೆ ಅನುದಾನ ಹೆಚ್ಚಳ ಮಾಡಲಾಗುವುದು 30 ಸಾವಿರ ಕೋಟಿ ರೂ. ಇದ್ದ ಅನುದಾನ 40 ಸಾವಿರ ಕೋಟಿಗೆ ಹೆಚ್ಚಳ ರೈತರ ಸಾಲ ಯೋಜನೆಗೆ 16.5 ಲಕ್ಷ ಕೋಟಿ ರೂ.ನಿಗದಿ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.
2015-16 ಬಜೆಟ್‍ನಲ್ಲಿ 13 ವಾಗ್ದಾನಗಳನ್ನು ನಾವು ಮಾಡಿದ್ದೆವು. ಕಳೆದ ವರ್ಷದ ಬಜೆಟ್ 6 ಸ್ತಂಭಗಳ ಮೇಲೆ ನಿಂತಿತ್ತು. ಆರೋಗ್ಯ ಸೇವೆಗಳ ಮೇಲಿನ ಹೂಡಿಕೆ ದೊಡ್ಡಮಟ್ಟದಲ್ಲಿ ಹೆಚ್ಚಳ ಮಾಡಲಾಗಿದೆ. ಪ್ರಧಾನಿ ಆತ್ಮನಿರ್ಭರ್ ಸ್ವಸ್ಥ ಭಾರತ ಯೋಜನೆ ಘೋಷಿಸುತ್ತಿದ್ದೇನೆ. ಈ ಯೋಜನೆಗೆ 64,184 ಕೋಟಿ. ರೂ. ಅನುದಾನ ನೀಡಲಾಗುವುದು. ಆರೋಗ್ಯ ಮೂಲಭೂತ ಸೌಕರ್ಯಸುಧಾರಣೆಗೆ ಅನುದಾನ ಬಳಸಲಾಗುವುದು. ಹೊಸ ಆರೋಗ್ಯ ಕೇಂದ್ರಗಳ ನಿರ್ಮಾಣ, 11 ರಾಜ್ಯಗಳಲ್ಲಿ 17 ಸಾವಿರ ಗ್ರಾಮೀಣ ಆರೋಗ್ಯ ಕೇಂದ್ರಗಳ ಸ್ಥಾಪನೆ, 602 ಜಿಲ್ಲೆಗಳಲ್ಲಿ ಮಲ್ಟಿ ಸ್ಪೆμÁಲಿಟಿ ಆಸ್ಪತ್ರೆ ನಿರ್ಮಾಣ, 5 ಹೊಸ ರೋಗ ನಿಯಂತ್ರಣ ಕೇಂದ್ರಗಳ ನಿರ್ಮಾಣ, 15 ತುರ್ತು ಶಸ್ತ್ರ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ ಇದರಿಂದ ಸಾಧ್ಯವಾಗಲಿದೆ ಎಂದರು.
ಜವಳಿ ಉದ್ಯಮದ ಚೇತರಿಕೆಗೆ ಹಲವು ಯೋಜನೆಗಳನ್ನು ಪ್ರಕಟಿಸಿದ ಸಚಿವೆ ನಿರ್ಮಲಾ ಸೀತಾರಾಮನ್, ಉದ್ಯಮದ ಪ್ರಗತಿಗೆ ಬೇಕಾದ ಮೂಲ ಸೌಕರ್ಯಗಳನ್ನು ನೀಡಲು ಸರಕಾರ ಬದ್ಧ ಎಂದು ಘೋಷಿಸಿದರು.
ಬ್ಯಾಂಕ್ ಠೇವಣಿದಾರ ವಿಮೆಗೆ ಹಣದ ಮೊತ್ತ ಏರಿಕೆ 1 ಲಕ್ಷ ರೂ. ನಿಂದ 5 ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದೆ. 6 ವರ್ಷಗಳಲ್ಲಿ ವಿದ್ಯುತ್ ಹಲವು ಸುಧಾರಣೆಗಳನ್ನು ತರಲಾಗಿದೆ. 2.8 ಕೋಟಿ ಮನೆಗಳಲ್ಲಿ 6 ವರ್ಷದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಹಕರು ಯಾರಿಂದ ಬೇಕಾದ್ರೂ ವಿದ್ಯುತ್ ಖರೀದಿಸಬಹುದು. ಅಸಂಘಟಿತ ಕಾರ್ಮಿಕ ವಲಯಕ್ಕೂ ಪಿಂಚಣಿವ್ಯವಸ್ಥೆ ಜಾರಿಗೊಳಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಗೆ ಹೆಚ್ಚು ಕ್ರಮ ಕೈಗೊಳ್ಳಲಾಗುವುದು. ದೇಶದಲ್ಲಿ 100 ಸೈನಿಕ ಶಾಲೆಗಳ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಹಳ್ಳಿಯಿಂದ ನಗರ ಪ್ರದೇಶಗಳಿಗೆ ತೆರಳು ಸುಲಭವಾಗುವಂತೆ ಪ್ರಯಾಣ ಸೌಕರ್ಯಕ್ಕೆ ಒತ್ತು. ಮೆಟ್ರೋ ನಿರ್ಮಾಣ ಯೋಜನೆ ಮತ್ತಷ್ಟು ವಿಸ್ತರಣೆ, ಪ್ರಯಾಣಿಕರ ಸುರಕ್ಷತೆ ಹಾಗೂ ಆರಾಮಾದಾಯಿಕ ಪ್ರಯಾಣಕ್ಕೆ ರೈಲ್ವೆ ಮೂಲ ಸೌಕರ್ಯ ಅಭಿವೃದ್ಧಿ, 46 ಸಾವಿರ ಕಿ.ಮೀ. ಬ್ರಾಡ್‍ಗೇಜ್ ಪರಿವರ್ತನೆಗೆ ಅನುದಾನ ನೀಡುವುದಾಗಿ ಪ್ರಕಟಿಸಿದರು.
ಕೊರೋನಾಗೆ ಎರಡು ಸ್ವದೇಶಿ ವ್ಯಾಕ್ಸಿನ್ ಉತ್ಪಾದನೆ ಮಾಡಲಾಗಿದೆ. ಕೊರೋನಾ ಕಾಲದಲ್ಲಿ ತೋರಿದ ದೃಢತೆಗೆ ಪ್ರತಿಯೊಬ್ಬರಿಗೂ ಶಿರಬಾಗಿ ನಮಿಸುವೆ. ಇಂದಿನ ಬಜೆಟ್ ಆತ್ಮ ನಿರ್ಭರ್ ಭಾರತದ ದೃಷ್ಟಿಕೋನ ತೋರಿಸುತ್ತದೆ. ಕೊರೋನಾ ಲಸಿಕೆಗೆ 35 ಸಾವಿರ ಕೋಟಿ ಮೀಸಲಿರಿಸಲಾಗಿದೆ. ಪರಿಸರ ಸಂರಕ್ಷಿಸಲು, ವಾಹನಗಳಿಗೆ ಫಿಟ್‍ನೆಸ್ ಟೆಸ್ಟ್. 15 ವರ್ಷಗಳ ನಂತರ ಅದರ ಆರೋಗ್ಯ ನೋಡಿ, ಗುಜರಿಗೆ. ಎಲ್ಲೆಡೆ ಆಟೋಮೇಷನ್ ಟೆಸ್ಟ್. ಸಾರ್ವಜನಿಕ ಆರೋಗ್ಯ ಕೇಂದ್ರಗಳ ಅಪ್‍ಗ್ರೇಡಿಗೆ ಒತ್ತು ನೀಡುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಒಟ್ಟಿನಲ್ಲಿ ಲಾಕ್‍ಡೌನ್ ಸಂಕಷ್ಟದಲ್ಲಿ ದೇಶದ ಆರ್ಥಿಕತೆಯ ಚೇತರಿಕೆಗೆ ಒತ್ತು ನೀಡಿ ಮಂಡಿಸಿದ ಬಜೆಟ್ ಹಲವು ಸುಧಾರಣೆ ಕ್ರಮಗಳ ಮೂಲಕ ಹೆಜ್ಜೆ ಇರಿಸಿದೆ.