ವಿಧಾನಮಂಡಲದ ಅಧಿವೇಶನ ನಡೆಯುತ್ತಿರೋದೆ ಕೇವಲ ಏಳು ದಿನ. ಈ ಏಳು ದಿನವೂ ಸಚಿವರು, ಶಾಸಕರಿಗೆ ಸದನದಲ್ಲಿ ಹಾಜರಿ ಇರಲು ಆಗುತ್ತಿಲ್ಲ. ಬಹುತೇಕ ಸದಸ್ಯರು ಸದನಕ್ಕೆ ಚಕ್ಕರ್ ಹಾಕಿದ್ದರಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆಡಳಿತ ಪಕ್ಷದ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಇನ್ನು ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಚಿವರ ವಿರುದ್ಧ ಹರಿಹಾಯ್ದರು.
ಹೌದು ಫೆ.1ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಗುರುವಾರ 4ನೇ ದಿನದ ಅಧಿವೇಶನ ನಡೆಯುತ್ತಿದ್ದ ವೇಳೆ ಗ್ಯಾಲರಿ ಸದಸ್ಯರಿಲ್ಲದೇ ಖಾಲಿ ಖಾಲಿ ಹೊಡೆಯುತ್ತಿರುವುದು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಿಜೆಪಿ ಪಕ್ಷದ ಶಾಸಕ ಯತ್ನಾಳ್, ಬಂಡೆಪ್ಪ ಕಾಶೆಂಪುರ, ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಸೇರಿ ಇನ್ನು ಹಲವರ ಆಕ್ರೋಶಕ್ಕೆ ಕಾರಣವಾಯಿತು. ಈ ರೀತಿ ಸದನ ನಡೆಸೋದಾದ್ರೆ ಯಾಕೆ ಸದನ ನಡೆಸಬೇಕು ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ಈ ವೇಳೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಅನುಮತಿ ಪಡೆದು ಹೋಗಿದ್ದಾರೆ. ಶೆಟ್ಟರ್ ಏರ್‍ಶೋಗೆ ಅನುಮತಿ ಪಡೆದುಕೊಂಡು ಹೋಗಿದ್ದಾರೆ. ಈಶ್ವರಪ್ಪ ಈಗ ಹೊರಗೆ ಹೋಗಿದ್ದಾರೆ, ಈಗಷ್ಟೇ ಬರುತ್ತಾರೆ, ವ್ಹಿ.ಸೋಮಣ್ಣ ಆರೋಗ್ಯ ಕಾರಣದಿಂದ ಹೊರಗೆ ಹೋಗಿದ್ದಾರೆ. ಇನ್ನು ಡಿಸಿಎಂ ಗೋವಿಂದ ಕಾರಜೋಳ, ಸುರೇಶ್‍ಕುಮಾರ್, ಡಾ.ಕೆ.ಸುಧಾಕರ್, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ, ಶಿವರಾಮ್ ಹೆಬ್ಬಾರ್, ಬಿ.ಶ್ರೀರಾಮುಲು, ಸೋಮಶೇಖರ್, ಶಶಿಕಲಾ ಜೊಲ್ಲೆ, ಕೆ.ಸಿ.ನಾರಾಯಣಗೌಡ, ಬಿ.ಸಿ.ಪಾಟೀಲ್, ಪ್ರಭು ಚವ್ಹಾಣ ಇದ್ದಾರೆ ಎಂದು ಸದನದ ಗಮನಕ್ಕೆ ತಂದರು. ಈ ವೇಳೆ ಮಧ್ಯಪ್ರವೇಶಿಸಿದ ಬಸನಗೌಡ ಪಾಟೀಲ್ ಯತ್ನಾಳ್ ಮಂತ್ರಿಗಳು ಆಗಲು ದೆಹಲಿ, ಬೆಂಗಳೂರಿಗೆ ನಿರಂತರವಾಗಿ ಓಡಾಡುತ್ತಾರೆ. ಮಂತ್ರಿ ಆದ ನಂತರ ಸದನಕ್ಕೆ ಬರೋದೇ ಇಲ್ಲ. ಇನ್ನು ಮುಖ್ಯಮಂತ್ರಿಗಳಂತೂ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಈ ರೀತಿಯಾದ್ರೆ ಸದನವಾದ್ರೂ ಯಾಕೆ ನಡೆಸುತ್ತಿರಿ ಎಂದು ಇನ್ನು ಹಲವರು ಸದಸ್ಯರು ಸ್ಪೀಕರ್‍ಗೆ ಪ್ರಶ್ನಿಸಿದರು.
ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಇದು ಬಹಳ ಪ್ರಾಮುಖ್ಯವಾದ ಅಧಿವೇಶನ, ರಾಜ್ಯಪಾಲರ ಭಾಷಣದ ಮೇಲೆ ಎಲ್ಲ ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಎಲ್ಲಾ ಸಚಿವರು, ಅಧಿಕಾರಿಗಳು ಕೇಳಬೇಕಾಗುವುದು ಅವರ ಕರ್ತವ್ಯ. ಅಧಿವೇಶನ ನಡೆಯುವಾಗ ಕಡ್ಡಾಯವಾಗಿ ಸಚಿವರು ಹಾಜರಾಗಿರಬೇಕು. ಅದನ್ನು ಬಿಟ್ಟು ಹೊರಗೆ ಎದ್ದು ಹೋಗುವುದಾದ್ರೆ ಯಾವ ಪುರುಷಾರ್ಥಕ್ಕೆ ಸಚಿವರಾಗಬೇಕು ಎಂದು ಪ್ರಶ್ನಿಸಿದರು. ಇದೇ ವೇಳೆ ಯತ್ನಾಳ್ ಅವರನ್ನು ಸಿದ್ದರಾಮಯ್ಯ ಪ್ರಚೋದನೆಗೆ ಒಳಪಡಿಸಿ, ಸಚಿವರ ಅನುಪಸ್ಥಿತಿ ಕುರಿತು ಚಾಟಿ ಬೀಸಿದರು. ಹೀಗೆ ಆದ್ರೆ ಸದನ ನಡೆಸೋದು ಬೇಡ, ಕಾಟಾಚಾರಕ್ಕೆ ಸದನ ನಡೆಸೋದು ಆದ್ರೆ ಬೇಡ, ಸದನ ಮುಂದೂಡಿ ಎಲ್ಲಿಯಾದ್ರೂ ಬೇರೆ ಕಡೆ ಹೋಗೋಣ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಒತ್ತಾಯಿಸಿದರು.
ಬಳಿಕ ಮಾತನಾಡಿದ ಸ್ಪೀಕರ್ ಎಲ್ಲ ಸದಸ್ಯರೂ ಕಡ್ಡಾಯವಾಗಿ ಇರಬೇಕು. ಅದೇ ರೀತಿ ಸಚಿವರು ಅಧಿಕಾರಿಗಳು ಸದನದಲ್ಲಿ ಇರಬೇಕು. ಈ ಸಂಬಂಧ ನಾನು ಎಲ್ಲರಿಗೂ ಸೂಚನೆ ನೀಡುತ್ತೇನೆ ಎಂದು ಹೇಳಿದರು. ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಮಧ್ಯಪ್ರವೇಶಿಸಿ ಸದನ ಸರ್ಕಾರದ ಮುಖ್ಯ ಸಚೇತಕರು ಸದನ ಆರಂಭಕ್ಕೂ ಮುನ್ನ ಬಂದು ಸ್ಪೀಕರ್ ಅವರನ್ನು ಭೇಟಿ ಮಾಡಿ, ಇಂದು ಇಂತಿಂತ ಶಾಸಕರು, ಸಚಿವರು ಬರುತ್ತಿಲ್ಲ ಎಂಬುದನ್ನು ತಿಳಿಸಬೇಕು. ಅಂದಾಗ ಸದಸ್ಯರಿಗೆ ನಿಮಗೆ ಉತ್ತರಿಸಲು ಅನುಕೂಲ ಆಗುತ್ತದೆ. ಆದ್ರೆ ಇದು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.
ಒಟ್ಟಾರೆ ಜನರಿಂದ ಆಯ್ಕೆಯಾಗಿ ಹೋಗಿ ಜನರು ಹಾಗೂ ಕ್ಷೇತ್ರದ ಸಮಸ್ಯೆಗಳ ಕುರಿತು ಸದನದಲ್ಲಿ ಚರ್ಚಿಸಬೇಕಾದ ಜನಪ್ರತಿನಿಧಿಗಳು ಈ ರೀತಿ ಬೇಜವಾಬ್ದಾರಿಯುತವಾಗಿ ಸದನಕ್ಕೆ ಗೈರು ಹಾಜರಾಗಿದ್ದು, ನಿಜಕ್ಕೂ ನಾಚಿಕೆಗೇಡಿ ಸಂಗತಿಯಾಗಿದೆ.