Athani

ಅಥಣಿ ಪೊಲೀಸ್ ಸಮುದಾಯ ಭವನದಲ್ಲಿ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡ ಕುಂದು ಕೊರತೆ ಸಭೆ

Share

ಅಥಣಿ ಪಟ್ಟಣದ ಪೋಲಿಸ್ ಸಮುದಾಯ ಭವನದಲ್ಲಿ ವಿಭಾಗಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.ಅಥಣಿ ಡಿ ವೈ ಎಸ್ ಪಿ ಎಸ್ ವಿ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಥಣಿ ,ಐಗಳಿ,ರಾಯಭಾಗ,ಕುಡಚಿ,ಕಾಗವಾಡ ಮತ್ತು ಹಾರೂಗೇರಿ ಪೋಲಿಸ್ ಠಾಣೆಗಳ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರು ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಹೇಳಿಕೊಂಡರು.

ಕಾಗವಾಡ ಪಿ ಎಸ್ ಐ ಆರ್ ಎಲ್ ಧರ್ಮಟ್ಟಿ,ಅಥಣಿ ಪಿ ಎಸ್ ಐ ಕುಮಾರ ಹಾಡಕಾರ,ಹಾರೂಗೇರಿ ಪಿ ಎಸ್ ಐ ಯಮನಪ್ಪಾ ಮಾಂಗ್,ರಾಯಭಾಗ ಸಿಪಿಐ ಎಚ್ ಡಿ ಮುಲ್ಲಾ, ಐಗಳಿ ಪಿ ಎಸ್ ಐ ಶಿವರಾಜ ನಾಯಕವಾಡಿ ಸೇರಿದಂತೆ ವಿವಿಧ ಪೋಲಿಸ್ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಮಾತನಾಡಿದ ಗುತ್ತಿಗೆ ಪೌರ ಕಾರ್ಮಿಕರ ಮುಖಂಡ ಬಸವರಾಜ ಕಾಂಬಳೆ ಬೀದಿ ವ್ಯಾಪಾರಸ್ಥರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಮತ್ತು ಬಡಕುಟುಂಬಗಳು ಬೀದಿ ವ್ಯಾಪಾರವನ್ನು ನಂಬಿದ ಕುಟುಂಬಗಳಿಗೆ ವಹಿವಾಟು ನಡೆಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಇನ್ನೂ ಇದೇ ವೇಳೆ ಮಾತನಾಡಿದ ಮಹೇಂದ್ರ ರಾಜಂಗಳೆ ಆರ್ ಎಸ್ ಎಸ್ ಪಥಸಂಚಲನವನ್ನು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಸಮುದಾಯಗಳ ಜನರು ವಾಸಿಸುವ ಬಡಾವಣೆಗಳಲ್ಲಿ ನಡೆಯದಂತೆ ತಡೆಯಬೇಕು,ಆರ್ ಎಸ್ ಎಸ್ ಪಥ ಸಂಚಲನದಿಂದಾಗಿ ಸಾಮಾಜಿಕವಾಗಿ ತಮ್ಮ ಬಡಾವಣೆಗಳಲ್ಲಿ ವೈಮನಸ್ಸು ಮೂಡುತ್ತಿದೆ ಆದ್ದರಿಂದ ಪೋಲಿಸ್ ಇಲಾಖೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.

ಇನ್ನುಳಿದಂತೆ ಸ್ಮಶಾನ ಭೂಮಿ ಕೊರತೆ,ಶಾಲಾ ವಿದ್ಯಾರ್ಥಿಗಳ ಬಸ್ ವ್ಯವಸ್ಥೆ ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳ ವ್ಯವಸ್ಥೆ ಒದಗಿಸುವದು ಸೇರಿದಂತೆ ಪ್ರಕರಣಗಳ ಗಂಭೀರತೆಯ ಆಧಾರದಲ್ಲಿ ದೂರು ಸ್ವೀಕರಿಸಬೇಕು ಎಂಬ ಸಲಹೆಗಳನ್ನು ವಿವಿಧ ಮುಖಂಡರು ನೀಡಿದರು.

ಕಾರ್ಯಕ್ರಮ ಸಮಾರೋಪದ ವೇಳೆ ಮಾತನಾಡಿದ ಅಥಣಿ ಡಿ ವೈ ಎಸ್ ಪಿ ಎಸ್ ವಿ ಗಿರೀಶ್ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಸ್ಯೆಗಳಿಗೆ ಆದಷ್ಟು ಬೇಗ ತಮ್ಮ ಇಲಾಖೆಯಿಂದ ಸ್ಪಂದಿಸುವ ಕೆಲಸ ಮಾಡುವದರ ಜೊತೆಗೆ ತಮ್ಮ ಇಲಾಖೆಗೆ ಸಂಭಂಧಪಡದ ಆದರೆ ಸಭೆಯಲ್ಲಿ ಪ್ರಸ್ತಾಪವಾದ ಸಮಸ್ಯೆಗಳನ್ನು ಆಯಾ ಇಲಾಖೆಗಳ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ಮಾಡುವದಾಗಿ ಹೇಳಿದರು ಇದೇ ವೇಳೆ 112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದ ಅವರು ಪೋಲಿಸ್ ಇಲಾಖೆಯಿಂದ ತುರ್ತು ಪರಿಸ್ಥಿತಿಯಲ್ಲಿ ಮತ್ತು ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ದೇಶಾದ್ಯಂತ ಒಂದೇ ಸಹಾಯವಾಣಿ ಇದ್ದು ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

Tags:

error: Content is protected !!