ಅಂಗನವಾಡಿ ಕಾರ್ಯಕರ್ತೆಯರಿಗೆ ಯೂನಿಫಾರ್ಮ ನೀಡುವ ಕುರಿತು ಇಂದಿನ ಕಲಾಪದಲ್ಲಿ ಚರ್ಚೆಯಾಯಿತು. ಇನ್ನು ಇದೇ ವೇಳೆ ಮೊಟ್ಟೆಗಳ ಖರೀದಿಯಲ್ಲಿ ಏರುಪೇರಾಗುವ ವೇಳೆ ಅಂಗನವಾಡಿ ಕಾರ್ಯಕರ್ತೆಯರಿಗೆ ಆಗುತ್ತಿರುವ ಹೊರೆ ಸಂಬಂಧವೂ ಸುದೀರ್ಘವಾಗಿ ಚರ್ಚಿಸಲಾಯಿತು.
ಹೌದು ಬುಧವಾರ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದಂತೆ ಶಾಸಕ ಸಂಜು ಮಟಂದೂರ್ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಯೂನಿಫಾರ್ಮ ನೀಡುವ, ಮೊಟ್ಟೆಗಳ ಖರೀದಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆ ತಪ್ಪಿಸುವ ಹಾಗೂ ಮೊದಲಿನಂತೆ ಮನೆ ಮನೆಗಳಿಗೆ ರೇಶನ್ ತಲುಪಿಸುವ ಕೆಲಸ ಆಗಬೇಕು ಎಂದು ಕೇಳಿದ್ದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ರಾಜ್ಯದ 65,911 ಅಂಗನವಾಡಿ ಕೇಂದ್ರಗಳಲ್ಲಿ ಸುಮಾರುರು 204 ಯೋಜನೆಗಳಿಂದ 6 ತಿಂಗಳಿನಿಂದ 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಹೀಗೆ ಒಟ್ಟು 42 ಲಕ್ಷ ಫಲಾನುಭವಿಗಳಿಗೆ ಯೋಜನೆ ಮುಟ್ಟಿಸುತ್ತಿದ್ದೇವೆ. 1999ರಿಂದ 2016ವರೆಗೂ ರೇಶನ್ ಕೊಡುವ ಪದ್ಧತಿಯಿತ್ತು.
2016 ಹಾಗೂ 2017ರಲ್ಲಿ ಸುಮಾರು ನಾಲ್ಕು ಜಿಲ್ಲೆಗಳ ಐದು ತಾಲೂಕುಗಳಲ್ಲಿ ಪೈಲಟ್ ಯೋಜನೆಯಾಗಿ ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ತಯಾರಿಸಿ ಗರ್ಭಿಣಿಯರಿಗೆ ಬಡಿಸುವ ಕಾರ್ಯಕ್ರಮ ಆರಂಭಿಸಲಾಯಿತು. ಉತ್ತರಕನ್ನಡ, ದಕ್ಷಿಣ ಕನ್ನಡ, ಕೊಡಗು ಸೇರಿ ಮುಂತಾದ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳು ದೂರ ಇರುವ ಪ್ರದೇಶಗಳಲ್ಲಿ ಫಲಾನುಭವಿಗಳ ಮನೆಗಳಿಗೆ ರೇಶನ್ ಕೊಡಲಾಗುತ್ತಿತ್ತು.
ಅದೇ ರೀತಿ ಕೊರೊನಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ರೇಶನ್ ಮನೆಗಳಿಗೆ ತಲುಪಿಸುತ್ತಿದ್ದೇವೆ. ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಸಾಧಕ, ಭಾದಕಗಳನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮೊಟ್ಟೆ ಖರೀದಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಯೂನಿಫಾರ್ಮ ವಿತರಿಸುವ ಸಂಬಂಧವೂ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಮ್ಮ ಮಲೆನಾಡು ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳು ಒಂದು ಕಿ.ಮಿ ದೂರ ಇವೆ, ಹೀಗಾಗಿ ಗರ್ಭಿಣಿಯರಿಗೆ ತೆರಳಲು ತೊಂದರೆ ಆಗುತ್ತದೆ. ಹೀಗಾಗಿ ಮನೆಗಳಿಗೆ ರೇಶನ್ ತಲುಪಿಸಿವ ಕೆಲಸ ಆದ್ರೆ ಒಳ್ಳೆಯದು ಎಂದರು.