ರಾಜ್ಯದಲ್ಲಿ ಹಕ್ಕಿಜ್ವರ ಪ್ರಕರಣ ಬೆಳಕಿಗೆ ಬಂದಿಲ್ಲ. ಆದರೂ, ಇಲಾಖೆಯ ಅಧಿಕಾರಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಆತಂಕ ಪಡದೆ ಮೊಟ್ಟೆ ಮತ್ತು ಮಾಂಸ ಸೇವಿಸಬಹುದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
ಆನ್‍ಲೈನ್ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಶುಕ್ರವಾರ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್, ಹಕ್ಕಿ ಜ್ವರದ ಬಗ್ಗೆ ತೀವ್ರವಾಗಿ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
ಕೇರಳ ರಾಜ್ಯಕ್ಕೆ ಕೋಳಿ ಮತ್ತು ಕೋಳಿ ಉತ್ಪನ್ನಗಳ ಮಾರಾಟ ಹಾಗೂ ಸಾಗಾಣಿಕೆಗೆ ನಿರ್ಬಂಧ ಇದೆ. ಉಳಿದಂತೆ ಎಲ್ಲ ಕಡೆ ಯಾವ ನಿರ್ಬಂಧವೂ ಇಲ್ಲ. ಸಾರ್ವಜನಿಕರು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ತಿಳಿಸಿದರು.
ಕೇರಳ ರಾಜ್ಯದಿಂದ ಒಳಬರುವ ಕೋಳಿ/ಕುಕ್ಕುಟ, ಕೋಳಿ ಉತ್ಪನ್ನಗಳ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಬರ್ಂಧಿಸಲಾಗಿದೆ. ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳು ಹಾಗೂ ಇತರೇ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೋಳಿ ಶೀತ ಜ್ವರದ ಮೇಲೆ ನಿಗಾ ವಹಿಸಲು, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅರಣ್ಯ ಇಲಾಖೆ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಪೆÇಲೀಸ್ ಇಲಾಖೆ ಜೊತೆಗೂಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ತಿಳಿಸಲಾಗಿದೆ ಎಂದು ಸಚಿವ ಪ್ರಭು ಚವ್ಹಾಣ ತಿಳಿಸಿದ್ದಾರೆ.
ಭಾರತ ಸರ್ಕಾರದ ಪರಿಷ್ಕರಿಸಿ ಹೊರಡಿಸಿರುವ 2021ರ ಹಕ್ಕಿಜ್ವರದ ನಿಯಂತ್ರಣ ಹಾಗೂ ನಿರ್ವಹಣೆ ಮಾರ್ಗಸೂಚಿಗಳ ಪ್ರಕಾರ ಸರ್ವೇಕ್ಷಣೆ/ಕಣ್ಗಾವಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಪಶು ಸಂಗೋಪನಾ ಇಲಾಖೆಯ ಪ್ರಧಾನ ಕಾರ್ಯದರ್ಶೀ ರಾಜೇಂದ್ರಕುಮಾರ್ ಕಠಾರಿಯಾ ಸೇರಿದಂತೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.