2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಇಲ್ಲದೇ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಅದೇ ರೀತಿ ಅಧಿಕಾರಕ್ಕೂ ಬರಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
: ಸೋಮವಾರ ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಯುವ ಘಟಕ ಹಾಗೂ ವಿದ್ಯಾರ್ಥಿ ಜನತಾ ದಳದ ಪದಾಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ಮುಂಬರುವ ಯಾವುದೇ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಏನೆಂಬುದು ನಮಗೆ ಗೊತ್ತಿದೆ. ಈ ಎರಡೂ ಪಕ್ಷಗಳು ಜೆಡಿಎಸ್ ಅಸ್ತಿತ್ವವೇ ಮುಗಿದು ಹೋಯ್ತು ಎಂದು ಅಪಪ್ರಚಾರ ಮಾಡುತ್ತಿವೆ.
ಯಾರೂ ನಮ್ಮನ್ನು ಮುಗಿಸಲು ಸಾಧ್ಯವಿಲ್ಲ ಎಂದ ಅವರು, ಕಾಂಗ್ರೆಸ್ ಬೆಂಬಲದಿಂದಲೇ ಜೆಡಿಎಸ್ ಪ್ರಧಾನಿ, ಮುಖ್ಯಮಂತ್ರಿಯಾಗಲು ನಾವೇನು ಅರ್ಜಿ ಹಾಕಿರಲಿಲ್ಲ ಎಂದು ಟಾಂಗ್ ಕೊಟ್ಟರು. ದೇವೇಗೌಡರನ್ನು ಪ್ರಧಾನಿ ಮಾಡಿ ಎಂದು ಕಾಂಗ್ರೆಸ್ ಪಕ್ಷದ ಮನೆಬಾಗಿಲಿಗೆ ಹೋಗಿರಲಿಲ್ಲ. ನಾವು ಎಂದೂ ಅವರ ಬಳಿಗೆ ಹೋಗಿರಲಿಲ್ಲ.
ಅವರಾಗಿಯೇ ನಮ್ಮ ಬಳಿ ಬಂದು ಪ್ರಧಾನಿ ಮತ್ತು ಸಿಎಂ ಆಗಲು ಬೆಂಬಲ ನೀಡಿದ್ದರು. ಅದೇ ರೀತಿ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಮೂಲ ಕಾಂಗ್ರೆಸ್ ಬಗ್ಗೆ ನಾನು ಮಾತನಾಡಿಲ್ಲ. ಆ ಕಾಂಗ್ರೆಸ್‍ನ ಹೋರಾಟದ ಬಗ್ಗೆ ಗೌರವವಿದೆ. ಈಗಿರುವ ಕಾಂಗ್ರೆಸ್ ಬಗ್ಗೆ ನಾನು ಟೀಕಿಸಿದ್ದೇನೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರಿಂದ ನಾನೇನು ಮುಖ್ಯಮಂತ್ರಿ ಆಗಿಲ್ಲ ಎಂದು ಕಿಡಿಕಾರಿದರು.