ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವು ಮಾಡದಿದ್ದರೆ ಗಲ್ಲಿಗಳಲ್ಲಿ ಭಗವಾಧ್ವಜ ಹಾರಿಸುವುದಾಗಿ ಎಂಇಎಸ್ ಬೆದರಿಸಿದೆ. ಕನ್ನಡ ಧ್ವಜವನ್ನು ತೆಗೆಯಬೇಕೆಂದು ಹೇಳುವುದೇ ಅಪರಾಧ. ಇನ್ನು ಬೆದರಿಕೆ ಹಾಕುವುದು ಅಕ್ಷಮ್ಯ. ಕೂಡಲೇ ಕನ್ನಡ ವಿರೋಧಿ ಪುಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹೌದು ಬೆಳಗಾವಿ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಿಸಿದ್ದಕ್ಕೆ ವಿನಾಕಾರಣ ಕಾಲು ಕೆರೆದು ಜಗಳಕ್ಕೆ ನಿಂತಿರುವ ನಾಡದ್ರೋಹಿ ಎಂಇಎಸ್ ಮತ್ತೆ ಉದ್ಧಟತನದಿಂದ ವರ್ತಿಸುತ್ತಿದೆ. ಇದರಿಂದ ಕೆರಳಿರುವ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮೂಲಕ ಕೆಂಡ ಕಾರಿದ್ದಾರೆ. ಅಷ್ಟಕ್ಕೂ ಕನ್ನಡ ಧ್ವಜವೆಂಬುದೇನಾದರೂ ಭಗವಾಧ್ವಜಕ್ಕೆ ವಿರುದ್ಧಾರ್ಥಕವೇ? ಕನ್ನಡಿಗನಿಗೆ ಕನ್ನಡ ಧ್ವಜ ಭಗವಾಧ್ವಜಕ್ಕೂ ಮಿಗಿಲು ಎಂದು ಅವರು ಟ್ವೀಟ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ಕನ್ನಡ ಧ್ವಜದ ವಿಚಾರದಲ್ಲಿ ನಡೆಯುತ್ತಿರುವ ಕಿತಾಪತಿಗಳನ್ನು ಸರ್ಕಾರ ನೋಡಿಯೂ ಸುಮ್ಮನಿದೆಯೇ..? ಅಥವಾ ಕನ್ನಡಿಗರಿಗೆ ಸರ್ಕಾರ ಹೆದರಬಾರದು ಎಂದು ಬಿಜೆಪಿ ಶಾಸಕರೊಬ್ಬರು ಹಿಂದೆ ಹೇಳಿದ್ದ ಮಾತನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.