State

ಅನುಭವ ಮಂಟಪ ಉದ್ಘಾಟಿಸಲು ಪ್ರಧಾನಿಗೆ ಆಹ್ವಾನ: ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ

Share

ಮಹಾನ್ ಮಾನವತಾವಾದಿ, ಜಗಜ್ಯೋತಿ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿದರು.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ಭೂಮಿ ಪೂಜೆ ನೆರವೇರಿಸಿದರು. ಬಸವತತ್ವದ ವಿಧಿವಿಧಾನದಂತೆ ಕಾರ್ಯಕ್ರಮ ಜರುಗಿತು.

ಈ ವೇಳೆ ಸಿಎಂ ಯಡಿಯೂರಪ್ಪ ಮಾತನಾಡಿ, ಮುಂದಿನ ಎರಡು ವರ್ಷಗಳೊಳಗಾಗಿ ಈ ಸುಂದರ ಅನುಭವ ಮಂಟಪ ನಿರ್ಮಾಣವಾಗುತ್ತದೆ. ಎರಡು ವರ್ಷದ ನಂತರ ಸುಂದರ ಕಟ್ಟಡ ನಿರ್ಮಾಣವಾದಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕರೆಸಿ ಮೂರು-ನಾಲ್ಕು ಲಕ್ಷ ಜನರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿಸುತ್ತೇನೆ ಎಂದು ಘೋಷಿಸಿದರು.
ಕಟ್ಟಡ ನಿರ್ಮಾಣ ನಿಗದಿತ ಅವಧಿಯಲ್ಲಿ ಆಗುವುದಕ್ಕಾಗಿ ನಾನೀಗಾಗಲೇ ಬಸವರಾಜ ಪಾಟೀಲ್ ಸೇಡಂ ಅವರಿಗೆ ಸಂಪೂರ್ಣ ಜವಾಬ್ದಾರಿ ನೀಡಿದ್ದೇನೆ.

ಆಧ್ಯಾತ್ಮಿಕ ಕೇಂದ್ರವಾಗಿರುವ ಬಸವಕಲ್ಯಾಣದಲ್ಲಿ ಹನ್ನೆರಡನೇ ಶತಮಾನದಲ್ಲಿ ವಚನಕಾರರು ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪವನ್ನು ನಿರ್ಮಿಸಿದ್ದಾರೆ. ಇಂದಿನ ಲೋಕಸಭೆ ವ್ಯವಸ್ಥೆಗೆ ಅಂದಿನ ಬಸವಣ್ಣನ ಅನುಭವ ಮಂಟಪವೇ ಆಧಾರವಾಗಿದೆ. ಬಸವಣ್ಣನವರ ಕಾಯಕ, ದಾಸೋಹ, ಸಮಾನತೆ ತತ್ವಗಳು ವಿಶ್ವಮಾನ್ಯವಾದುವುಗಳು. ಪ್ರಧಾನಿ ಮೋದಿ ಇತ್ತೀಚೆಗೆ ನಡೆದ ನೂತನ ಸಂಸತ್ ಭವನದ ಭೂಮಿಪೂಜೆ ಸಮಯದಲ್ಲಿ ಬಸವಣ್ಣನನ್ನು ಸ್ಮರಿಸಿದರು. ಅದು ಕನ್ನಡಿಗರ ಹೆಮ್ಮೆ ಎಂದು ಸಿಎಂ ಬಣ್ಣಿಸಿದರು.

ಈ ವೇಳೆ ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತನಾಡಿ, ಬಸವಣ್ಣನವರ ತತ್ವಗಳಿಗೆ ವಿಶ್ವ ಮಾನ್ಯತೆ ಇದೆ. ಬಸವಣ್ಣನವರು ವಿಶ್ವಕಂಡ ಅಪರೂಪದ ನಾಯಕ. ಅವರ ತತ್ವಗಳು ಸಮಾನತೆಯ ಸಮಾಜ ನಿರ್ಮಾಣಕ್ಕೆ ದಾರಿ ದೀಪವಾಗಿವೆ. ಬಸವಣ್ಣನವರ ಅನುಭವ ಮಂಟಪದ ಕಲ್ಪನೆಯನ್ನು ಸಾಕಾರಗೊಳಿಸಲು ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣವಾಗುತ್ತಿರುವುದು ಹೆಮ್ಮೆ ಪಡಬೇಕಾದ ವಿಚಾರ ಎಂದರು.

ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರು ಸಾನ್ನಿಧ್ಯ ವಹಿಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಡಿ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಕಲ್ಯಾಣ ಕರ್ನಾಟಕ ಸಾಂಸ್ಕøತಿಕ ಹಾಗೂ ಮಾನವ ಸಂಪನ್ಮೂಲ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಸಂಸದರಾದ ಭಗವಂತ ಖೂಬಾ, ಡಾ: ಉಮೇಶ್ ಜಾಧವ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ್ ಪಾಟೀಲ್, ದತ್ತಾತ್ರೇಯ ಪಾಟೀಲ ರೇವುರ್, ಶುಭಾμï ಗುತ್ತೇದಾರ, ರಾಜಕುಮಾರ್ ಪಾಟೀಲ್ ತೆಲ್ಕೂರ್, ಶಶಿಲ್ ನಮೋಶಿ, ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ಮತ್ತಿತರರು ಭಾಗವಹಿಸಿದ್ದರು.

Tags:

error: Content is protected !!