ಬೆಳಗಾವಿ ಮಹಾನಗರ ಪಾಲಿಕೆ ಬಳಿಯಲ್ಲಿ ಕನ್ನಡಪರ ಸಂಘಟನೆಗಳು ಹಾರಿಸಿರುವ ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಜನವರಿ 21ರಂದು ನಡೆಸಲು ಉದ್ದೇಶಿಸಿದ್ದ ರ್ಯಾಲಿಗೆ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಪರವಾನಗಿ ನೀಡಿಲ್ಲ ಎಂದು ಡಿಸಿಪಿ ಡಾ.ವಿಕ್ರಮ ಆಮ್ಟೆ ತಿಳಿಸಿದರು.
ಬೆಳಗಾವಿ ಬೆಳಗಾವಿ ಮಹಾನಗರ ಪಾಲಿಕೆ ಬಳಿಯಲ್ಲಿ ಕನ್ನಡಪರ ಸಂಘಟನೆಗಳು ಹಾರಿಸಿರುವ ಕನ್ನಡ ಧ್ವಜ ತೆರವಿಗೆ ಆಗ್ರಹಿಸಿ ಜನವರಿ 21ರಂದು ಬೃಹತ್ ಪ್ರತಿಭಟನೆ ರ್ಯಾಲಿ ನಡೆಸುವುದಾಗಿ ಎಂಇಎಸ್ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಎಂಇಎಸ್ ಸಂಘಟನೆಯ ಮುಖಂಡರು ಕಾರ್ಯಕರ್ತರನ್ನು ಕರೆದು ಪೊಲೀಸ್ ಇಲಾಖೆ ಅಧಿಕಾರಿಗಳು ಎರಡು ಸುತ್ತಿನಲ್ಲಿ ಮಾತುಕತೆ ನಡೆಸಿದರು. ರ್ಯಾಲಿ ಕೈಬಿಡುವಂತೆ ಎಂಇಎಸ್ ಮನವೊಲಿಸಲು ಪ್ರಯತ್ನಿಸಿದರು.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ಡಾ.ವಿಕ್ರಮ ಆಮ್ಟೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಂಇಎಸ್‍ಗೆ ರ್ಯಾಲಿಗೆ ಅನುಮತಿ ನೀಡುವುದು ಸಾಧ್ಯವಿಲ್ಲ. ಈ ಕುರಿತು ಮುಖಂಡರಿಗೆ ತಿಳಿಸಿದ್ದೇವೆ. ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿದ್ದೇವೆ. ಯಾವುದೇ ಕಾರಣದಿಂದಲೂ ಹೊರಗಿನವರ ಪ್ರವೇಶಕ್ಕೆ ಅವಕಾಶ ಇಲ್ಲ. ರ್ಯಾಲಿಗೂ ಪರವಾನಗಿ ಇಲ್ಲ. ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕಾನೂನು ಉಲ್ಲಂಘಿಸಿದರೆ ಅಂಥವರ ಮೇಲೆ ಕಠಿಣ ಕ್ರಮ ಅನಿವಾರ್ಯವಾಗಬಹುದು ಎಂದು ಎಚ್ಚರಿಕೆ ಸಂದೇಶ ನೀಡಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಇಎಸ್ ಮುಖಂಡ ದೀಪಕ ದಳವಿ, ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದ್ದಾರೆ. ಅದಕ್ಕಾಗಿ ನಾವು ಪ್ರತಿಭಟನೆಯನ್ನು ಮುಂದಕ್ಕೆ ಹಾಕಿದ್ದೇವೆ. ಈಗ ಪ್ರತಿಭಟನೆ ನಡೆಸುವುದಿಲ್ಲ ಎಂದರು.
ಒಟ್ಟಿನಲ್ಲಿ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿರುವುದರಿಂದ ಎಂಇಎಸ್ ಜಿಲ್ಲಾಡಳಿತದೊಂದಿಗೆ ಚರ್ಚಿಸಲು ಸಿದ್ಧವಾಗಿದೆ. ಆದರೆ ಜಿಲ್ಲಾಧಿಕಾರಿ ಭೇಟಿವರೆಗೂ ಕಾಯಲು ಅವರು ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಮುಖಂಡರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ.