ಉತ್ತರ ಕರ್ನಾಟಕದ ಅದರಲ್ಲೂ ಅಥಣಿ ಮಂದಿ ಮಾತಿನ ಮ್ಯಾಲೆ ನಿಲ್ಲುವ ಮಂದಿ. ಯಾರಾದ್ರೂ ಸವಾಲ್ ಹಾಕಿದ್ರೆ ಅದನ್ನು ಮಾಡ್ದೇ ಬಿಡೋದಿಲ್ಲಾ. ಇಲ್ಲೊಬ್ಬ ಯುವಕ “ನನಗೆ ಸವಾಲು ಹಾಕುತ್ತಾರಾ..?” ಅನ್ನುತ್ತಾ 80 ಕೆಜಿ ತೂಕದ ಕಬ್ಬನ್ನು ಹೆಗಲು ಮೇಲೆ ಇಟ್ಟುಕೊಂಡು 3 ಕಿಲೋಮೀಟರ್ ದೂರ ನಡೆದುಕೊಂಡು ಸಾಹಸ ಮೆರೆದಿದ್ದಾರೆ.
ಸದ್ಯ ಅಥಣಿ ಭಾಗದಲ್ಲಿ ಕಬ್ಬು ಕಟಾವು ಹಂಗಾಮು ಆಗಿರೋದ್ರಿಂದ ಹತ್ತು ಹದಿನೈದು ಜನರು ಒಗ್ಗಟ್ಟಾಗಿ ಕಬ್ಬಿನ ತೋಟದಲ್ಲಿ ಕೆಲಸ ಮಾಡುತ್ತಾರೆ, ಬಿಡುವಿನ ವೇಳೆಯಲ್ಲಿ ಒಬ್ಬೊಬ್ಬರು ಸವಾಲು ಹಾಕುತ್ತಾ ಸಾಹಸದ ಸವಾಲು ಎಸಗುತ್ತಾರೆ.
ಅದೇ ರೀತಿ ಮಹೇಶ್ ಗಸ್ತಿ ಎನ್ನುವವರಿಗೆ 3 ಕಿಲೋಮೀಟರ್ ದೂರದ ಮಡ್ಡಿ ಪೀರ್ ದರ್ಗಾದ ವರೆಗೆ 80 ಕೆಜಿ ತೂಕದ ಕಬ್ಬನ್ನು ಹೊತ್ತುಕೊಂಡು ಹೋದ್ರೆ ಐದು ಸಾವಿರ ರೂಪಾಯಿ ಕೊಡುತ್ತೇನೆ ಎಂದು ಒಬ್ಬರು ಸವಾಲು ಹಾಕಿದ್ದಾರೆ. ಸವಾಲನ್ನು ಸ್ವೀಕರಿಸಿದ ಮಹೇಶ್ 80 ಕೆಜಿ ತೂಕದ ಕಬ್ಬು ಹೊತ್ತು ಸಾಗಿ ಗುರಿ ಮುಟ್ಟಿದ್ದಾರೆ.
ನಿಜಕ್ಕೂ 80 ಕಿಲೋ ಭಾರ ಹೊತ್ತುಕೊಂಡು ಮೂರು ಕಿಲೋಮೀಟರ್ ದೂರ ನಡೆದುಕೊಂಡು ಬರುವುದು ಸಾಮಾನ್ಯ ಕೆಲಸವಲ್ಲ, ಈ ಸಾಹಸ ಮೆಚ್ಚುವಂತದ್ದು, ಸ್ಥಳದಲ್ಲಿ ನಮಗೆ ಎತ್ತಕ್ಕೂ ಆಗದ ಕಬ್ಬನ್ನು ಹೊತ್ತ ಇವರು ಮೂರು ಕಿಲೋಮೀಟರ್ ದೂರದಲ್ಲಿರುವ ದೇವಸ್ಥಾನಕ್ಕೆ ಬಂದು ಪ್ರದಕ್ಷಿಣೆ ಹಾಕಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಒಟ್ಟಾರೆ ಆಧುನಿಕ ಬದುಕಿನಲ್ಲಿ ಕಲ್ಲು ಎತ್ತುವುದು, ಕುಸ್ತಿ, ಭಾರವಾದ ವಸ್ತುಗಳನ್ನು ಎತ್ತುವುದು, ಅಪರೂಪ ಎನಿಸಿದರೂ ಗ್ರಾಮೀಣ ಭಾಗಗಳಲ್ಲಿ ಇನ್ನೂ ಈ ರೀತಿಯ ಆಚರಣೆಗಳು ಉಳಿದಿರುವುದು ಹೆಮ್ಮೆ ಪಡುವ ವಿಷಯವಾಗಿದೆ. ಗ್ರಾಮೀಣ ಪ್ರದೇಶದ ಈ ಯುವಕನ ಸಾಧನೆ ಸದ್ಯ ಪ್ರಶಂಸೆಗೆ ಕಾರಣವಾಗಿದೆ.