Bagalkot

2ಎ ಮೀಸಲಾತಿಗಾಗಿ ಬಸವಣ್ಣನವರ ಐಕ್ಯಕ್ಷೇತ್ರದಿಂದ ಪಾದಯಾತ್ರೆ..ಸರ್ಕಾರದ ವಿರುದ್ಧ ಪಂಚಮಸಾಲಿಗರ ರಣಕಹಳೆ

Share

ಪಾದಯಾತ್ರೆಯನ್ನು ಹಿಂಪಡೆಯುವುದಾಗಿ ನಾವು ಎಲ್ಲೂ ಹೇಳಿಲ್ಲ. ಸಚಿವರಾದ ಮುರುಗೇಶ್ ನಿರಾಣಿ ಅವರು ಭಾವೋದ್ವೇಗದಲ್ಲಿ ಮಾತನಾಡಿದ್ದಾರೆ. ಅವರು ಈಗ ಸಚಿವರಾಗಿದ್ದಾರೆ. ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ಪಂಚಮಸಾಲಿ ಸಮುದಾಯಕ್ಕೆ 2ಎ ಅಡಿ ಮೀಸಲಾತಿಯನ್ನು ದೊರಕಿಸಿಕೊಡಬೇಕು ಎಂದು ಪಂಚಮಸಾಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಅಡಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಇಂದು ಬೃಹತ್ ಪಾದಯಾತ್ರೆ ಪ್ರಾರಂಭಿಸಲಾಯಿತು. ಈ ವೇಳೆ ಸಿದ್ಧಲಿಂಗ ಮಹಾಸ್ವಾಮಿಗಳು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ರವಿಕಾಂತೇಗೌಡ ಪಾಟೀಲ್, ಶಶಿಕಾಂತ ನಾಯಿಕ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ಪಂಚಮಸಾಲಿ ಸಮಾಜದ ಪಂಚಲಕ್ಷ ಹೆಜ್ಜೆಗಳು ಎಂಬ ಶೀರ್ಷಿಕೆಯಡಿ ಕೈಗೊಂಡಿರುವ ಈ ಪಾದಯಾತ್ರೆಯನ್ನು ಬಸವಣ್ಣನವರ ಐಕ್ಯ ಮಂಟಪ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿದ್ದು, ಪಂಚಮಸಾಲಿ ರಾಷ್ಟ್ರೀಯ ಘಟಕ, ರಾಜ್ಯ ಯುವ ಘಟಕ, ರಾಜ್ಯದ ವಿವಿಧ ಘಟಕಗಳ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಲಿಂಗಾಯತ ಸಮಾಜ ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ಮಾಡುತ್ತ ಬಂದಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಅಡಿಯಲ್ಲಿ ಮೀಸಲಾತಿ ನೀಡಬೇಕೆಂದು 2012ರಿಂದಲೂ ಹೋರಾಟ ಮಾಡುತ್ತಿದೆ. ಸರ್ಕಾರಕ್ಕೆ ಹಲವು ಗಡುವುಗಳನ್ನು ನೀಡಿದೆ. ನಮ್ಮವರೇ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ನಾವು ಆಗ್ರಹಿಸಿದ್ದೆವು. ಆದರೆ, ನಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ನಾವು ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧದವರೆಗೆ 700ಕಿ.ಮೀ. ಐತಿಹಾಸಿಕ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಸ್ವಾಮೀಜಿ ಸಿ.ಸಿ.ಪಾಟೀಲ್, ಕರಡಿ ಸಂಗಣ್ಣ ಅವರು ಪಾದಯಾತ್ರೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಸದ್ಯದಲ್ಲೇ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಬೇಡಿಕೆ ಈಡೇರಿಸುವ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸೋಣ ಎಂದು ಹೇಳಿದರು. ಆದರೆ, ನಾವು ನವೆಂಬರ್ 28, ಡಿಸೆಂಬರ್ 12ರ ವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದೆವು. ಈಗಲೂ ಕೂಡ ಕಾಲ ಮಿಂಚಿಲ್ಲ. ನಾಡದೊರೆಗಳು ಅಮಿತ್ ಷಾ ಅವರೊಂದಿಗೆ ಚರ್ಚಿಸಿ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದರಾದ ಶಿವರಾಮೇಗೌಡ, ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ಹಾಲಪ್ಪ ನಂದಿಹಳ್ಳಿ, ಶ್ರೀಶೈಲಪ್ಪ ಬಿದರೂರ, ಮಾಜಿ ಎಂಎಲ್‍ಸಿ ಸೋಮಣ್ಣ ಬೇವಿನಮರದ, ಜಿ.ಪಂ.ಸದಸ್ಯೆ ರೋಹಿಣಿ ಪಾಟೀಲ್, ಬಸವರಾಜ್ ರೊಟ್ಟಿ ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು. ಶಾಸಕ ಒಟ್ಟಾರೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಪಂಚಮಸಾಲಿಗರು ರಣಕಹಳೆ ಮೊಳಗಿಸಿದ್ದು. ಇದು ಯಾವ ಹಂತಕ್ಕೆ ಹೋಗಿ ಮುಟ್ಟುತ್ತದೆ ಎಂದು ಕಾಯ್ದು ನೋಡಬೇಕಿದೆ.

 

Tags:

error: Content is protected !!