ರಾಜ್ಯಾಧ್ಯಂತ ಹೊಸ ವರ್ಷದ ಮೊದಲ ದಿನ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಶಾಲೆಗಳು ಆರಂಭವಾಗಿವೆ. ಸುಮಾರು ಆರೇಳು ತಿಂಗಳ ನಂತರ ನಮ್ಮ ರಾಜ್ಯದಲ್ಲಿ ಮಕ್ಕಳು ಶಾಲೆ ಕಡೆ ಮುಖ ತಿರುಗಿಸಿ ನಡೆಯುತ್ತಿದ್ದಾರೆ. ಇಂದು ನಿಜವಾಗಲೂ ಕೂಡ ಮಕ್ಕಳ ನಡಿಗೆ ಶಾಲೆಯೆಡೆಗೆ ಆರಂಭವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಕೊರೊನಾ ಓಡಿಸೋಣ ನಮ್ಮ ಮಕ್ಕಳನ್ನು ಸುರಕ್ಷಿತ ವಾತಾವರಣದಲ್ಲಿ ಓದಿಸೋಣ ಎಂಬ ಧ್ಯೇಯವಾಕ್ಯದಡಿ ಶುಭ ಕಾರ್ಯ ಆರಂಭವಾಗಿದೆ. ಬಹಳ ಸಂಭ್ರಮದಿಂದ ವಿದ್ಯಾರ್ಥಿಗಳು ಯೂನಿಪಾರ್ಮ ಹಾಕಿಕೊಂಡು ಶಾಲೆ ಕಡೆ ನಡೆಯುತ್ತಿರುವುದು, ಸ್ನೇಹಿತರನ್ನು ಮಾತನಾಡಿಸುತ್ತಿರುವ ದೃಶ್ಯ ಮರೆತೆ ಹೋಗಿದ್ದೇವು. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಶ್ರೀ, ಸುತ್ತೂರು ಶ್ರೀಗಳು, ಸಿದ್ಧಗಂಗಾ ಶ್ರೀಗಳು ಕೂಡ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಶುಕ್ರವಾರ ಹೊಸ ವರ್ಷದ ಮೊದಲ ದಿನ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತಿಯ ಪಿಯುಸಿ ತರಗತಿಗಳು ಆರಂಭವಾಗಿವೆ. ಅದೇ ರೀತಿ 6,7,8,9ನೇ ತರಗತಿ ವಿದ್ಯಾಗಮ ತರಗತಿಗಳು ಆರಂಭವಾಗಿವೆ ಎಂದರು.
ಮುಂದುವರಿದು ಮಾತನಾಡಿದ ಸುರೇಶ್‍ಕುಮಾರ್ ಆನೆಕಲ್ ತಾಲೂಕಿನ ಹೆಬ್ಬಗೋಡಿ, ಹೆಮ್ಮಾಗರ, ಚಂದಾಪುರ, ಅತ್ತಿಬೆಲೆ, ಸರ್ಜಾಪುರ ಈ ಗ್ರಾಮಗಳ ಸರ್ಕಾರಿ ಶಾಲೆಗಳು, ಚಂದಾಪುರದ ಸ್ವಾಮಿ ವಿವೇಕಾನಂದ ಗ್ರಾಮಾಂತರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಬೊಮ್ಮಸಂದ್ರದ ಸರಸ್ವತಿ ವಿದ್ಯಾನಿಕೇತನದ 10ನೇ ತರಗತಿ ಮತ್ತು ಪಿಯುಸಿ ಕಾಲೇಜಿಗೆ ಭೇಟಿ ನೀಡಿ ಮಕ್ಕಳ ಜೊತೆ ಮಾತಾಡಿ ಅವರ ಭಾವನೆ, ಅಭಿಪ್ರಾಯ ತಿಳಿದುಕೊಂಡು ಅವರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿದ್ದೇನೆ. ಅದೇ ರೀತಿ ಮೂರು ಕಡೆ ಶಿಕ್ಷಕರ ಜೊತೆ ಸಂವಾದ ಕೂಡ ನಡೆಸಿದ್ದೇನೆ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಒಟ್ಟು 5492 ಪದವಿ ಪೂರ್ವ ಕಾಲೇಜುಗಳಿವೆ, ಅದರಲ್ಲಿ ದಾಖಲಾತಿ ಹೊಂದಿರುವ 2,41,965 ವಿದ್ಯಾರ್ಥಿಗಳ ಪೈಕಿ 78,794 ವಿದ್ಯಾರ್ಥಿಗಳು ಇಂದು ಹಾಜರಾಗಿದ್ದಾರೆ. ಶೇ.32.56ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 16,850 ಪ್ರೌಢಶಾಲೆಗಳಲ್ಲಿ ದಾಖಲಾತಿ ಹೊಂದಿರುವ ವಿದ್ಯಾರ್ಥಿಗಳ ಪೈಕಿ 9,27,472 ಪೈಕಿ 3,80,264 ವಿದ್ಯಾರ್ಥಿಗಳು ಇಂದು ತರಗತಿಗೆ ಹಾಜರಾಗಿದ್ದಾರೆ. ಶೇ.41ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಗಲಿದೆ ಎಂದು ಸುರೇಶ್‍ಕುಮಾರ್ ತಿಳಿಸಿದರು.
ಒಟ್ಟಾರೆ ಅತ್ಯಂತ ಸುರಕ್ಷಿತವಾಗಿ ಶಾಲಾ-ಕಾಲೇಜುಗಳನ್ನು ಆರಂಭಿಸಿದ್ದೇವೆ. ವಿದ್ಯಾರ್ಥಿಗಳು ಅತ್ಯಂತ ಖುಷಿ ಖುಷಿಯಾಗಿ ತರಗತಿಗಳಿಗೆ ಹಾಜರಾಗಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಸಂತಸ ವ್ಯಕ್ತಪಡಿಸಿದರು.