ಸಿದ್ಧರಾಮಯ್ಯ ಸಿಎಂ ಆಗಿದ್ದ ವೇಳೆ ಗೋಕಾಕ್- ಚಿಕ್ಕೋಡಿ ಜಿಲ್ಲೆ ರಚನೆ ಬಗ್ಗೆ ನಿರ್ಣಯ ಮಾಡಲಾಗಿತ್ತು. ಬೈಲಹೊಂಗಲದವರು ನಮಗೂ ಪ್ರತ್ಯೇಕ ಜಿಲ್ಲೆ ಕೊಡಿ ಅಂತ ಕೇಳಿದ್ದರಿಂದ ಈ ವಿಚಾರ ಅಷ್ಟಕ್ಕೆ ನಿಂತಿದೆ. ಹೊಸ ತಾಲೂಕು ರಚನೆ ಮಾಡಿ ಆ ನಂತರ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆ ಪ್ರಯತ್ನಿಸುತ್ತಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಮವಾರ ಗೋಕಾಕ್ ಜಿಲ್ಲಾ ಹೋರಾಟ ಸಮಿತಿ ಪದಾಧಿಕಾರಿಗಳು ಗೋಕಾಕ್ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಿಂದ ಜಲಸಂನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರ ಕಚೇರಿ ವರೆಗೆ ರ್ಯಾಲಿ ನಡೆಸಿದರು. ಈ ವೇಳೆ ಗೋಕಾಕ್ ಜಿಲ್ಲೆ ಮಾಡುವಂತೆ ಆಗ್ರಹಿಸಿ ಹೋರಾಟಗಾರರು ಘೋಷಣೆ ಕೂಗಿದರು.
: ನಂತರ ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ರಮೇಶ ಜಾರಕಿಹೊಳಿ ಮೂಡಲಗಿ, ಕೌಜಲಗಿ, ಮುರಗೋಡ, ಯರಗಟ್ಟಿ, ತೇರದಾಳ ಸೇರಿದಂತೆ ಇನ್ನಿತರ ತಾಲೂಕುಗಳನ್ನು ಪುನರ್ ವಿಂಗಡನೆ ಮಾಡಿ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಗೋಕಾಕ್ ಹೊಸ ತಾಲೂಕು ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. ಕೋವಿಡ್ ಹಿನ್ನೆಲೆ ವಿಳಂಬವಾಗಿದೆ.
ಹೀಗಾಗಿ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗೋಣ ಎಂದು ಹೋರಾಟಗಾರರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗೋಕಾಕ್ನ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಹೋರಾಟಗಾರ ರಾಜೇಂದ್ರ ಸಣ್ಣಕ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.