ಆರ್‍ಎಸ್‍ಎಸ್ ಹಾಗೂ ಬಿಜೆಪಿ ಮುಖಂಡರ ಹೆಸರು ಹೇಳಿಕೊಂಡು ವಂಚನೆ ಮಾಡುತ್ತಿದ್ದ ಎಂಬ ಆರೋಪ ಕೇಳಿಬಂದಿರುವ ಯುವರಾಜ್ ಅಲಿಯಾಸ್ ಸ್ವಾಮಿ ಅಕೌಂಟ್‍ನಿಂದ ನಟಿ ರಾಧಿಕಾ ಕುಮಾರಸ್ವಾಮಿ ಅಕೌಂಟ್‍ಗೆ ಕೋಟಿಗೂ ಹೆಚ್ಚು ಹಣ ವರ್ಗಾವಣೆಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಇಂದು ಸಿಸಿಬಿ ಅಧಿಕಾರಿಗಳು ನಟಿ ರಾಧಿಕಾರನ್ನು ವಿಚಾರಣೆ ನಡೆಸಿದರು.
ಈ ಸಂಬಂಧ ಗುರುವಾರ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆ ಶುಕ್ರವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾದರು. ಸತತ 4 ಗಂಟೆಗಳ ಕಾಲ ರಾಧಿಕಾರ ವಿಚಾರಣೆ ನಡೆಸಲಾಗಿದೆ. ಈ ಮಧ್ಯ ಆರೋಪಿ ಯುವರಾಜ್‍ನನ್ನೂ ಸಿಸಿಬಿ ಕಚೇರಿಗೆ ಕರೆಯಿಸಿ ಮುಖಾಮುಖಿ ಕೂರಿಸಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನಲಾಗಿದೆ. ಇನ್ನು ವಂಚನೆ ಆರೋಪ ಹೊತ್ತಿರುವ ಯುವರಾಜ್ ಅಲಿಯಾಸ್ ಸ್ವಾಮಿಯ ವಿಚಾರಣೆಯನ್ನ ಸಿಸಿಬಿ ಪೆÇಲೀಸರು ಮುಂದುವರೆಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ವಿಚಾರಣೆ ಸಂಬಂಧ ಮಾಹಿತಿ ನೀಡಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಎಸಿಪಿ ನಾಗರಾಜ್ ರಾಧಿಕಾ ಕುಮಾರಸ್ವಾಮಿಯವರನ್ನು ವಿವರವಾಗಿ ವಿಚಾರಣೆ ನಡೆಸಿದ್ದಾರೆ. ರಾಧಿಕಾ ನೀಡಿರುವ ಹೇಳಿಕೆಯ ಮೇರೆಗೆ ಮುಂದಿನ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ಸಿಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೇನೆ. ಮತ್ತೆ ಅಧಿಕಾರಿಗಳು ಕರೆದರೆ ವಿಚಾರಣೆಗೆ ಹಾಜರಾಗುತ್ತೇನೆ. ಈಗ ಅಧಿಕಾರಿಗಳು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಕರೆದಿಲ್ಲ. ನಾನು ಬೆಂಗಳೂರಿನಲ್ಲೇ ಇರುತ್ತೇನೆ, ಎಲ್ಲೂ ಓಡಿ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಒಟ್ಟಾರೆ ಯುವರಾಜ್ ಅಲಿಯಾಸ್ ಸ್ವಾಮಿ ಖಾತೆಯಿಂದ ನಟಿ ರಾಧಿಕಾ ಕುಮಾರಸ್ವಾಮಿಗೆ 1.25 ಕೋಟಿ ಹಣ ವರ್ಗಾವಣೆ ಆರೋಪದಲ್ಲಿ ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದು. ಇದು ಎಲ್ಲಿ ಹೋಗಿ ಮುಟ್ಟುತ್ತದೆ ಎಂದು ಕಾಯ್ದು ನೋಡಬೇಕಿದೆ.