ತಮ್ಮ ಶಾಸಕರ ಸಮಸ್ಯೆ ಆಲಿಸಲು ಸಿಎಂ ಬಿಎಸ್ ಯಡಿಯೂರಪ್ಪ ಕರೆದಿದ್ದ ಶಾಸಕರ ಸಭೆಯಲ್ಲಿ ದೂರುಗಳ ಸುರಿಮಳೆಯೇ ಕಂಡು ಬಂದಿದೆ. ಹಾಲಿ ಸಚಿವರ ವಿರುದ್ಧ ಬಿಜೆಪಿ ಶಾಸಕರೇ ಸಿಎಂ ಬಿಎಸ್ವೈ ಮುಂದೆಯೇ ದೂರು ನೀಡಿದ್ದಾರೆ. ನಮ್ಮ ಕ್ಷೇತ್ರದ ಕೆಲಸ ಮಾಡಿಕೊಡಲು ಸಚಿವರು ಕಮಿಷನ್ ಕೇಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
: ಹೌದು ತಮ್ಮ ನಾಯಕತ್ವದ ವಿರುದ್ಧ ಶಾಸಕರು ಒಬ್ಬೊಬ್ಬರಾಗಿ ಅಸಮಾಧಾನ ಹೊರ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸಿಎಂ ಯಡಿಯೂರಪ್ಪ ಕಳೆದ ಎರಡು ದಿನಗಳಿಂದ ವಿಭಾಗವಾರು ಶಾಸಕರ ಸಭೆ ಕರೆದಿದ್ದರು. ಸಭೆಯಲ್ಲಿ ಶಾಸಕರು ತಮ್ಮ ಅಳಲನ್ನು ಸಿಎಂ ಮುಂದೆ ತೋಡಿಕೊಂಡರು. ನಿನ್ನೆ ಮಧ್ಯ ಕರ್ನಾಟಕ ಭಾಗದ ಶಾಸಕರ ಸಭೆಯಲ್ಲಿ ಅನುದಾನ ಬಿಡುಗಡೆ, ವಿಜಯೇಂದ್ರ ಹಸ್ತಕ್ಷೇಪ ಸೇರಿದಂತೆ ಹಲವು ವಿಚಾರಗಳ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪ ಮಾಡಿದ್ದರು. ಇದೇ ವೇಳೆ ರೇಣುಕಾಚಾರ್ಯ ಹಾಗೂ ಯತ್ನಾಳ್ ನಡುವೆ ವಾಗ್ವಾದ ಕೂಡ ಆಗಿತ್ತು.
ಇಂದು ನಡೆದ ಸಭೆಯಲ್ಲಿ ಐದಾರು ಶಾಸಕರು ಮುಖ್ಯಮಂತ್ರಿಗಳ ಮುಂದೆ ಹೊಸ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಸಚಿವರ ವಿರುದ್ಧ ಬಿಜೆಪಿ ಶಾಸಕರೇ ದೂರು ನೀಡಿದ್ದಾರೆ. ಮಧ್ಯವರ್ತಿ ಮೂಲಕ ಹೋದ್ರೆ ಕೆಲ ಸಚಿವರು ಕೆಲಸ ಮಾಡುತ್ತಾರೆ. ಶಾಸಕರ ಪತ್ರಕ್ಕೂ ಯಾವುದೇ ಕಿಮ್ಮತ್ತು ಕೊಡುವುದಿಲ್ಲ. ಇದನ್ನು ತಪ್ಪಿಸಿ ಸಂಬಂಧಿಸಿದ ಸಚಿವರಿಗೆ ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಬಿಜೆಪಿ ಶಾಸಕರು ಒತ್ತಡ ಹಾಕಿದರು. ಶಾಸಕರ ಬಳಿಯೇ ಮಂತ್ರಿಗಳು ಕಮಿಷನ್ ಕೇಳುತ್ತಿದ್ದಾರೆ. ಮಿನಿಸ್ಟರ್ಗಳಿಂದ ಯಾವುದೇ ಕೆಲಸ ಆಗುತ್ತಿಲ್ಲ. ಮಿನಿಸ್ಟರ್ಗಳನ್ನು ನೇರವಾಗಿ ನಾವು ಭೇಟಿ ಕೂಡ ಮಾಡಲು ಆಗುತ್ತಿಲ್ಲ.
ಏನಾದ್ರು ಕೆಲಸ ಮಾಡಿಕೊಡಿ ಎಂದರೆ ಕಮಿಷನ್ ಕೇಳುತ್ತಿದ್ದಾರೆ. ನಾವು ಕೂಡ ಏಜೆಂಟ್ಗಳ ಮೂಲಕ ಕೆಲಸ ಮಾಡಿಕೊಳ್ಳಬೇಕಾ..? ಏನಿದು ಅವಾಂತರ..? ಕೂಡಲೇ ಸರಿಪಡಿಸಿ ಎಂದು ಸಿಎಂಗೆ ಐದಾರು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ. ಅವಾಂತರ ಸರಿ ಮಾಡದೇ ಹೋದ್ರೆ ಹೈಕಮಾಂಡ್ಗೂ ದೂರು ನೀಡುತ್ತೇವೆ ಎಂದು ಇದೇ ವೇಳೆ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.
10ರಿಂದ 20% ಕಮಿಷನ್ ಕೊಟ್ಟರೆ ಮಾತ್ರ ಕೆಲಸ ಆಗುತ್ತಂತೆ ಶಾಸಕರಾದ ನಾವು ಏಜೆಂಟ್ಗಳ ಹತ್ತಿರ ಹೋಗಬೇಕು..! ಇದೆಂಥಾ ವ್ಯವಸ್ಥೆ ಎಂದು ಆಕ್ರೋಶ ಹೊರ ಹಾಕಿದ ಶಾಸಕರು. ನೀವೆ ಬೇಗ ಇದನ್ನು ಸರಿ ಮಾಡಿ, ಇಲ್ಲದಿದ್ರೆ ಹೈಕಮಾಂಡ್ಗೆ ದೂರು ನೀಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಶಾಸಕರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ಸಚಿವರ ಆಟಾಟೋಪದ ವಿರುದ್ಧ ಕಂಗಾಲಾಗಿರುವ ಕೆಲಸ ಬಿಜೆಪಿ ಶಾಸಕರು ತೀವ್ರ ಅಸಮಾಧಾನ ಹೊರ ಹಾಕಿದ್ದು. ಇದಕ್ಕೆಲ್ಲಾ ಸಿಎಂ ಬಿಎಸ್ವೈ ಬ್ರೇಕ್ ಹಾಕುತ್ತಾರಾ ಎಂದು ಕಾಯ್ದು ನೋಡಬೇಕಿದೆ.