ನಾಳೆಯೇ ಸಚಿವ ಸಂಪುಟ ವಿಸ್ತರಣೆ ಆಗಬೇಕು ಎನ್ನುವುದು ನನ್ನ ಆಗ್ರಹವಾಗಿದೆ ಆದ್ರೆ ಈ ಸಂಬಂಧ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ನೀರಾವರಿ ಸಚಿವ ರಮೇಶ ಜಾರಕಿಹೊಳಿ ಮತ್ತೆ ಪುನರುಚ್ಚರಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬೆಳಗಾವಿಯಲ್ಲಿ ಉತ್ತರಿಸಿದ ರಮೇಶ ಜಾರಕಿಹೊಳಿ ಅತೀ ಶೀಘ್ರದಲ್ಲಿಯೇ ಆಗಬೇಕು ಎಂದು ನಾನು ಬಹಳ ದಿನಗಳ ಹಿಂದಿನಿಂದ ಆಗ್ರಹಿಸುತ್ತಿದ್ದೇನೆ. ಧಾರ್ಮಿಕ ಭಾವನೆಯಿಂದ ಹೋಗುವಂತ ದೇಶ ನಮ್ಮದಾಗಿದೆ. ಆದ್ರೆ ಜನವರಿ 14-15ರವರೆಗೂ ಮಾಡಬಾರದು ಎಂಬ ಉದ್ದೇಶ ಬಿಜೆಪಿಯಲ್ಲಿದೆ. ಹೀಗಾಗಿ ಪಕ್ಷದ ವರಿಷ್ಠರು, ಸಿಎಂ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ ಎಂದರು.
ಜನವರಿ 15ರ ನಂತರ ಯಡಿಯೂರಪ್ಪ ಸಿಎಂ ಆಗಿ ಉಳಿಯುವುದಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ರಮೇಶ ಜಾರಕಿಹೊಳಿ ಡಿಕೆ ಶಿವಕುಮಾರ್ ಭವಿಷ್ಯ ಅವರಿಗೆ ಗೊತ್ತು. ನಮ್ಮ ಭವಿಷ್ಯ ಪ್ರಕಾರ ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ತಿರುಗೇಟು ನೀಡಿದರು.
ಕೊರೊನಾ ವ್ಯಾಕ್ಸಿನ್ ವಿತರಣೆ ಸಂಬಂಧ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳು ಕೂಡಿಕೊಂಡು ದೇಶ ಮತ್ತು ರಾಜ್ಯದ ಜನತೆಗೆ ಲಸಿಕೆ ಕೊಡಬೇಕು ಎಂದು ನಿರ್ಧರಿಸಿದ್ದಾರೆ. ಅದೇ ರೀತಿ ಉಚಿತವಾಗಿಯೇ ಲಸಿಕೆ ವಿತರಿಸುತ್ತೇವೆ ಎಂದು ಈಗಾಗಲೇ ಅನೌನ್ಸ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಒಟ್ಟಾರೆ ಸಚಿವ ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ, ಕೊರೊನಾ ಲಸಿಕೆ ವಿತರಣೆ ಸೇರಿದಂತೆ ಹಲವು ರಾಜಕೀಯ ವಿಷಯಗಳ ಕುರಿತು ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು.