Politics

ಸಿಎಂ ದೆಹಲಿ ಭೇಟಿ ವೇಳೆ ಕೇಳಿ ಬಂತಾ ನಾಯಕತ್ವ ಬದಲಾವಣೆ ಕೂಗು..!

Share

ಬಿಜೆಪಿ ರಾಷ್ಟ್ರ ನಾಯಕರಾದ ಅಮಿತ್ ಶಾ, ಜೆಪಿ ನಡ್ಡಾ ಹಾಗೂ ಅರುಣ್‍ಕುಮಾರ್ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚೆ ನಡೆಸಿದ ವೇಳೆ ಸಂಪುಟ ವಿಸ್ತರಣೆಗಿಂತಲೂ ನಾಯಕತ್ವ ಬದಲಾವಣೆಯ ಬಗ್ಗೆ ಅಮಿತ್ ಶಾ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂಬ ಮಾಹಿತಿ ಸಧ್ಯ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೌದು ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ಕೂಗು ಹಲವು ದಿನಗಳಿಂದ ರಾಜ್ಯದಿಂದ ಹಿಡಿದು ದಿಲ್ಲಿಯವರೆಗೂ ಕೇಳಿ ಬರುತ್ತಿರುವ ವಿಚಾರ. ಹೀಗಾಗಿಯೇ ಸಂಪುಟ ವಿಸ್ತರಣೆ ಮಾಡದೇ ಬಿಜೆಪಿ ಹೈಕಮಾಂಡ್ ತಡೆ ಹಿಡಿದಿದೆ ಎಂಬ ಮಾತು ಕೇಳಿ ಬಂದಿತ್ತು. ಆದ್ರೆ ರವಿವಾರ ಹೈಕಮಾಂಡ್ ಬುಲಾವ್ ಹಿನ್ನೆಲೆ ಪುತ್ರ ವಿಜಯೇಂದ್ರ ಜೊತೆಗೆ ದೆಹಲಿಗೆ ಹಾರಿದ ಸಿಎಂ ಬಿಎಸ್‍ವೈ ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯ ಉಸ್ತುವಾರಿ ಅರುಣ್‍ಕುಮಾರ್‍ನ್ನು ಭೇಟಿ ಮಾಡಿದ್ದಾರೆ.

ಈ ವೇಳೆ ಸಚಿವ ಸಂಪುಟ ವಿಸ್ತರಣೆಗಿಂತಲೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ, ಯಡಿಯೂರಪ್ಪ ಒಂದು ವೇಳೆ ಸಿಎಂ ಸ್ಥಾನ ತ್ಯಜಿಸಿದರೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಚರ್ಚೆ ಸಹ ನಡೆದಿದೆ. ಮೀಟಿಂಗ್ ವೇಳೆ, ಸಿಎಂ ಸ್ಥಾನದ ಬದಲಾಗಿ ಯಡಿಯೂರಪ್ಪಗೆ ದಕ್ಷಿಣ ಭಾರತದಲ್ಲೇ ಉನ್ನತ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ. ಇನ್ನು ಪುತ್ರ ರಾಘವೇಂದ್ರಗೆ ಸುರೇಶ ಅಂಗಡಿ ಅವರ ನಿಧನದಿಂದ ತೆರವಾಗಿರುವ ಸಚಿವ ಸ್ಥಾನ ನೀಡುವ ಬಗ್ಗೆಯೂ ಲೆಕ್ಕಾಚಾರ ನಡೆದಿದೆ. ತಮ್ಮ ಅಭಿಪ್ರಾಯ ತಿಳಿಸುವಂತೆ ಯಡಿಯೂರಪ್ಪ ಅವರಿಗೆ ವರಿಷ್ಠರು ಹೇಳಿದ್ದು, ನಿರ್ಧಾರ ತಿಳಿಸಲು ಟೈಮ್ ಕೊಟ್ಟಿದ್ದಾರೆ.

ಹೀಗಾಗಿ ಅಮಿತ್ ಶಾ ನಿವಾಸದಿಂದ ಹೊರಬಂದ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡದೇ ಕರ್ನಾಟಕ ಭವನಕ್ಕೆ ತೆರಳಿದ್ದಾರೆ. ನಂತರ ನಾಯಕತ್ವ ಬದಲಾವಣೆ ಕುರಿತಾಗಿ ಚರ್ಚೆ ನಡೆದಿದೆ ಎಂಬುದು ಭಾರೀ ಸುದ್ದಿಯಾಗುತ್ತಿದ್ದಂತೆ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿಎಂ ಯಡಿಯೂರಪ್ಪ ವರಿಷ್ಠರೊಂದಿಗೆ ನಡೆದ ಸಭೆ ನನಗೆ ಸಂತೋಷ, ಸಮಾಧಾನ ತಂದಿದೆ. ಆದಷ್ಟು ಬೇಗ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರಿಂದ ಸಿಹಿಸುದ್ದಿ ಸಿಗಲಿದೆ ಎಂದು ಹೇಳಿದ್ದಾರೆ.

ಸಂಪುಟ ವಿಸ್ತರಣೆ, ಪುನಾರಚನೆ ವಿಚಾರವಾಗಿ ಸ್ಪಷ್ಟನೆ ನೀಡದೇ ವರಿಷ್ಠರಿಂದ ಗುಡ್ ನ್ಯೂಸ್ ಸಿಗಲಿದೆ ಎಂದಿದ್ದಾರೆ.
ಒಟ್ಟಾರೆ ಸಿಎಂ ಬಿಎಸ್‍ವೈ ನೋಡಿದ್ರೆ ಹೈಕಮಾಂಡ್ ಭೇಟಿ ತೃಪ್ತಿಕರ ಎನ್ನುತ್ತಿದ್ದರೆ, ನಾಯಕತ್ವ ಬದಲಾವಣೆ ವಿಚಾರವೇ ಬಹು ಚರ್ಚೆಯಾಗಿದೆ ಎಂಬ ಮಾತು ಜೋರಾಗಿ ಕೇಳಿ ಬರುತ್ತಿದೆ. ಎಲ್ಲದಕ್ಕೂ ಕಾಲವೇ ಉತ್ತರ ನೀಡಬೇಕಿದೆ.

 

 

 

Tags:

error: Content is protected !!