ಅರಣ್ಯ ಇಲಾಖೆ ದಿನಗೂಲಿ ನೌಕರರ ಶೋಷಣೆ ಮತ್ತು ನಿಂದನೆಯನ್ನು ಕೈಬಿಟ್ಟು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಸರ್ಕಾರಿ ದಿನಗೂಲಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ನೌಕರರ ಸಂಘಟನೆಯವರು ಬೆಳಗಾವಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಮುಷ್ಕರ ನಡೆಸಿದರು.
ಬೆಳಗಾವಿ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದ ರಾಜ್ಯ ಅರಣ್ಯ ಇಲಾಖೆಯ ಸರ್ಕಾರಿ ದಿನಗೂಲಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ನೌಕರರ ಸಂಘಟನೆಯ ಕಾರ್ಯಕರ್ತರು, ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರನ್ನು ಶೋಷಿಸಲಾಗುತ್ತಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ. ಇದನ್ನು ತಪ್ಪಿಸಿ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ತಿಳಿಸಿದರು.
ಈ ವೇಳೆ ಅರಣ್ಯ ಇಲಾಖೆಯ ಸರ್ಕಾರಿ ದಿನಗೂಲಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷೆ ಹೇಮಾವತಿ ಮಾತನಾಡಿ, ದಿನಗೂಲಿ ನೌಕರರಿಗೆ 8 ಗಂಟೆ ಕೆಲಸ ನಿಗದಿಪಡಿಸಬೇಕು, ವಾರದ ರಜೆ ಕಡ್ಡಾಯಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು. ದಿನಗೂಲಿ ನೌಕರರಿಗೆ ಸಮವಸ್ತ್ರ ಮತ್ತು ಗುರುತಿನ ಚೀಟಿ ವಿತರಿಸಬೇಕು. ನಾಲ್ಕು ಐದು ವರ್ಷ ಕೆಲಸ ನಿರ್ವಹಿಸಿರುವ ನೌಕರರನ್ನು ವಿನಾಕಾರಣ ಕೆಲಸದಿಂದ ತೆಗೆಯಬಾರದು, 10 ವರ್ಷ ಕೆಲಸ ಮಾಡಿದ ನೌಕರರಿಗೆ ಕನಿಷ್ಠ 1 ಸಾವಿರ ರೂ. ಹೆಚ್ಚುವರಿ ವೇತನ ನೀಡಬೇಕು. 10 ವರ್ಷ ಸೇವೆ ಸಲ್ಲಿಸಿದ್ದರೆ ಕ್ಷೇಮಾಭಿವೃದ್ಧಿ ಅಧಿನಿಯಮದಂತೆ ಸೌಲಭ್ಯ ಕಲ್ಪಿಸಬೇಕು ಮತ್ತಿತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಈ ವೇಳೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ ಮಾತನಾಡಿ, ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ. ಕೆಲವೊಂದು ಬೇಡಿಕೆಗಳು ಇಲಾಖೆಯ ಅಧಿಕಾರಿಗಳ ವ್ಯಾಪ್ತಿಗೆ ಮೀರಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅನಿರ್ದಿಷ್ಟಾವಧಿ ಮುಷ್ಕರ ಕೈಬಿಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ದಿನಗೂಲಿ ನೌಕರರ ಸಂಘದ ಮುಖಂಡರು, ಕಾರ್ಯಕರ್ತರು, ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು.