ಕೋವಿಡ್ ಸೋಂಕು ತಡೆ ಹಿನ್ನೆಲೆಯಲ್ಲಿ ಈ ಬಾರಿ ಕೇರಳ ರಾಜ್ಯದ ಶ್ರೀಕ್ಷೇತ್ರ ಕ್ಷೇತ್ರ ಶಬರಿಮಲೈ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅಲ್ಲಿಯ ಸರ್ಕಾರ ನಿರ್ಬಂಧ ವಿಧಿಸಿದೆ. ಮಾರ್ಗಸೂಚಿ ಹೆಸರಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಅಯ್ಯಪ್ಪಸ್ವಾಮಿ ಭಕ್ತರು ದೇವರ ದರ್ಶನಕ್ಕೆ ಇರುವ ಅಡ್ಡಿ ಆತಂಕಗಳನ್ನು ಹೇಳಿಕೊಂಡು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ವೈ.ಓ: ಕೋವಿಡ್ ಸೋಂಕು ತಡೆಗೆ ದೇಶಾದ್ಯಂತ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಹಾಗಾಗಿ ಈ ಬಾರಿ ಜಾಗೃತ ಕ್ಷೇತ್ರ ಶಬರಿಮಲೈ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಕೇರಳ ಸರ್ಕಾರ ಕಟ್ಟು ನಿಟ್ಟಿನ ನಿರ್ಬಂಧ ವಿಧಿಸಿದೆ. ಪ್ರತಿವರ್ಷದಂತೆ ಮಾಲೆ ಧರಿಸಿ ವ್ರತ ಆಚರಿಸಿರುವ ಬೆಳಗಾವಿ ಜಿಲ್ಲೆಯ ನೂರಾರು ಅಯ್ಯಪ್ಪಸ್ವಾಮಿ ಭಕ್ತರು, ದೇವರ ದರ್ಶನಕ್ಕೆ ಹೋಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಕೇರಳದಲ್ಲಿ ದೇವರ ದರ್ಶನಕ್ಕೆ ಇರುವ ಅಡ್ಡಿ ಆತಂಕಗಳನ್ನು ಹೇಳಿಕೊಂಡು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ ಟೆಸ್ಟ್ ಉಚಿತವಾಗಿದೆ. ಆದರೆ ಕೇರಳ ಸರ್ಕಾರ ಭಕ್ತರಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿದೆ. ವ್ರತಾಚರಣೆ ಮುಗಿಸಿ ಇರಮುಡಿ ಸಲ್ಲಿಸಲು ತೆರಳಬೇಕಿರುವ ಭಕ್ತರಿಗೆ ಆನ್‍ಲೈನ್‍ನಲ್ಲಿ ವಾಹನ ಸೌಲಭ್ಯವೂ ಲಭ್ಯವಾಗುತ್ತಿಲ್ಲ. ಕೆಲವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಸಿಕ್ಕಿದೆ. ಪ್ರಯಾಣಕ್ಕೆ ಅವಕಾಶ ಸಿಕ್ಕವರು ದೇವರ ಸನ್ನಿಧಿಗೆ ತೆರಳುವುದು ಕಠಿಣ ನಿಯಮಗಳಿಂದಾಗಿ ಸಾಧ್ಯವಾಗುತ್ತಿಲ್ಲ. ಎರಡೂವರೆ ದಿನ ಪ್ರಯಾಣ ಮಾಡಿ, ಮಾರ್ಗಸೂಚಿ ಪಾಲನೆಯ ಕಠಿಣ ನಿಯಮ ಅನುಸರಿಸುತ್ತ ದೇವರ ದರ್ಶನ ಪಡೆಯಲು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ ಎಂದು ಭಕ್ತರು ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಅಯ್ಯಪ್ಪಸ್ವಾಮಿಯ ಭಕ್ತ ಆನಂದ ನವಲೆ ಮಾತನಾಡಿ, ಪ್ರತಿಬಾರಿ ಬೆಳಗಾವಿ ಜಿಲ್ಲೆಯಿಂದ ಲಕ್ಷಾಂತರ ಭಕ್ತರು ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುತ್ತಾರೆ. ಈ ಬಾರಿ ಶೇ.10ರಷ್ಟು ಭಕ್ತರಿಗೂ ಅವಕಾಶ ಸಿಗುತ್ತಿಲ್ಲ. ಎಲ್ಲಿ ಮಾಲೆ ಧರಿಸಿರುತ್ತಾರೋ ವ್ರತಾಚರಣೆ ನಂತರ ಅಲ್ಲೇ ಮಾಲೆ ತ್ಯಜಿಸಬೇಕು. ಆದರೆ ಎರಡೂವರೆ ದಿನಗಳ ಪ್ರಯಾಣ, ಕಠಿಣ ನಿಯಮಗಳ ಕಾರಣದಿಂದ ಇದು ಸಾಧ್ಯವಾಗುತ್ತಿಲ್ಲ. ಕರ್ನಾಟಕ ಸರ್ಕಾರ ಅನುಕೂಲ ಮಾಡಿಕೊಟ್ಟರೂ ಕೇರಳ ಸರ್ಕಾರ ಮೊಂಡು ಹಠ ಪ್ರದರ್ಶಿಸುತ್ತಿದೆ. ಇದನ್ನು ಸಡಿಲಗೊಳಿಸಬೇಕು ಎಂದು ಅಳಲು ತೋಡಿಕೊಂಡರು.
ಎಸ್‍ಬಿಐ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ಹಾಗೂ ಅಯ್ಯಪ್ಪಸ್ವಾಮಿ ಪರಮ ಭಕ್ತ ಮಹಾದೇವಪ್ಪ ಯಾಳವಾರ್ ಮಾತನಾಡಿ, ನಾನು 24ನೇ ವರ್ಷದಿಂದ ಅಯ್ಯಪ್ಪಸ್ವಾಮಿ ಭಕ್ತನಾಗಿದ್ದೇನೆ. ಕರ್ನಾಟಕ ಸರ್ಕಾರ ಉಚಿತ ಕೋವಿಡ್ ಟೆಸ್ಟ್‍ನಿಂದು ಹಿಡಿದು ಭಕ್ತರಿಗೆ ಹಲವು ಅನುಕೂಲ ಕಲ್ಪಿಸಿದೆ. ಆದರೆ ಕೇರಳ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿ ದರ್ಶನಕ್ಕೆ ಅಡ್ಡಿಯಾಗಿದೆ. ಈ ಎಲ್ಲ ಅಡೆತಡೆ ದಾಟಿ ಅಯ್ಯಪ್ಪಸ್ವಾಮಿ ದರ್ಶನ ಪಡೆಯುವುದು ಹರಸಾಹಸ ಎನಿಸಿದೆ. ಕರ್ನಾಟಕ ಸರ್ಕಾರ ಕೂಡಲೇ ಕೇರಳ ಸರ್ಕಾರದೊಂದಿಗೆ ಮತುಕತೆ ನಡೆಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಒಟ್ಟಿನಲ್ಲಿ ಸಂಕ್ರಾಂತಿಯ ಮಕರಜ್ಯೋತಿ ವೀಕ್ಷಿಸಲು ಶಬರಿಮಲೈಗೆ ತೆರಳಬೇಕಿದ್ದ ಭಕ್ತರಿಗೆ ಈ ಬಾರಿ ಕೋವಿಡ್ ಕಾರಣದಿಂದ ತೊಂದರೆ ಎದುರಾಗಿದೆ. ತಮಗೆ ದೇವರ ದರ್ಶನ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಭಕ್ತರು ಸರ್ಕಾರಗಳಿಗೆ ಮನವಿ ಮಾಡುತ್ತಿದ್ದಾರೆ.