Belagavi

ವಿವಾಹಿತ ಬಾಲಕಿ ಕೊಲೆ ಪ್ರಕರಣ: ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ

Share

ಹುದಲಿಯಲ್ಲಿ ವಿವಾಹಿತ ಬಾಲಕಿಯನ್ನು ಕೊಲೆ ಮಾಡಿ ಸುಟ್ಟು ಹಾಕಲಾಗಿದ್ದು, ಇದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ವಿರೋಧಿ ಸಂಘಟನೆ, ದಲಿತ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯ ಹಗೇದಾಳ ಗ್ರಾಮದ ಕೂಲಿಯಿಂದ ಜೀವನ ನಿರ್ವಹಿಸುವ ಬಡ ಕುಟುಂಬವೊಂದು ತಮ್ಮ 16 ವರ್ಷದ ಮಗಳನ್ನು ಹುದಲಿ ಗ್ರಾಮದ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದರು. ಮದುವೆ ನಂತರ ಮಗಳನ್ನು ಗಂಡನ ಮನೆಗೆ ಕಳುಹಿಸಿದ್ದ ಕುಟುಂಬ ಕೂಲಿ ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿತ್ತು. ಆದರೆ ಮರುದಿನವೇ ಮಗಳು ಮೃತಪಟ್ಟ ಸುದ್ದಿಯನ್ನು ಈ ಕುಟುಂಬಕ್ಕೆ ತಲುಪಿಸಲಾಯಿತು. ಈ ಕುಟುಂಬ ಊರಿಗೆ ವಾಪಸಾಗಿ ವಿಚಾರಿಸಿದಾಗ ಶವವನ್ನು ಸುಟ್ಟು ಹಾಕಿರುವುದು ಬೆಳಕಿಗೆ ಬಂತು.

ಈ ಹಿನ್ನೆಲೆಯಲ್ಲಿ ಇದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ವಿರೋಧಿ ಸಂಘಟನೆ, ದಲಿತ ಮಹಿಳಾ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮೃತ ಬಾಲಕಿಯ ತಾಯಿ ಮಾತನಾಡಿ, ಮಗಳನ್ನು ಗಂಡನ ಮನೆಗೆ ಕಳುಹಿಸಿ ಬೆಂಗಳೂರಿಗೆ ಹೋದೆವು. ಆದರೆ ಹೋದ ದಿನವೇ ಮಗಳ ಸಾವಿನ ಸುದ್ದಿ ಮುಟ್ಟಿಸಲಾಯಿತು. ವಾಪಸ್ ಬಂದಾಗ ಶವವೂ ಇರಲಿಲ್ಲ. ಶವವನ್ನು ಸುಟ್ಟು ಹಾಕಲಾಗಿತ್ತು. ಮಗಳನ್ನು ಕೊಲೆ ಮಾಡಿ ಸುಟ್ಟು ಹಾಕಲಾಗಿದ್ದು, ನನಗೆ ನ್ಯಾಯ ಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ವಿರೋಧಿ ಸಂಘಟನೆಯ ಸುಶೀಲಾ ಮಾತನಾಡಿ, ಶಾಲೆಗಳು ಬಂದ್ ಆಗಿವೆ. ಮಕ್ಕಳ ಸಾಗಾಣಿಕೆ, ಬಾಲ್ಯವಿವಾಹ ಹೆಚ್ಚಿವೆ. ಚಿಕ್ಕೋಡಿ, ರಾಯಬಾಗ, ಸವದತ್ತಿ ಮತ್ತಿತರ ಕಡೆ ಇದಕ್ಕಾಗಿ ಏಜೆಂಟರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಹುದಲಿಯಲ್ಲಿ ಮದುವೆ ಮಾಡಿಕೊಟ್ಟಿದ್ದ ಹಗೇದಾಳ ಗ್ರಾಮದ 16 ವರ್ಷದ ಹುಡುಗಿಯನ್ನು ಕೊಲೆ ಮಾಡಿ ಸುಟ್ಟು ಹಾಕಲಾಗಿದೆ. ಈ ಪ್ರಕರಣದಲ್ಲಿ ಕೇಸ್ ಕೂಡ ದಾಖಲಾಗಿಲ್ಲ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಬಡಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Tags:

error: Content is protected !!