Belagavi

ವಚನಗಳೆಂಬ ಹಣತೆಗಳ ಬೆಳಕಿನಲ್ಲಿ ಬಸವ ಸಂಸತ್ತು ಉದಯಿಸಬೇಕು..ಅಳಗುಂಡಿ ಅಂದಾನಯ್ಯ

Share

ಬೆಳಗಾವಿ: ಬಸವಾದಿ ಶರಣರು ಪ್ರಜ್ವಲಿಸಿ ಕೊಟ್ಟಿರುವ ವಚನಗಳೆಂಬ ಹಣತೆಗಳ ಬೆಳಕಿನಲ್ಲಿ ಮನೆ ಮನೆಗಳಲ್ಲೂ ಅಮರಗಣಂಗಳು ಹುಟ್ಟಬೇಕು. ಅನುಭವ ಮಂಟಪದ ಮಾದರಿಯಲ್ಲಿ ಬಸವ ಪರಿಣಿತ ಸಮಾಜ ಸೃಷ್ಟಿಸುವ ಬಸವ ಸಂಸತ್ತಿನ ಉದಯವಾಗಬೇಕು ಎಂದು ಬಸವಾದಿ ಶರಣರ ಜೀವನ ಚರಿತ್ರೆಯ ಸಂಶೋಧಕ ಅಳಗುಂಡಿ ಅಂದಾನಯ್ಯ ಹೇಳಿದ್ದಾರೆ.

ಬಸವ ಭೀಮ ಸೇನೆಯ ವತಿಯಿಂದ ಬೆಳಗಾವಿ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಉದ್ಯಾನದ ಶ್ರೀ ಬಸವೇಶ್ವರರ ಪ್ರತಿಮೆಯ ಬಳಿ ಗುರುವಾರದಂದು ಹಮ್ಮಿಕೊಂಡಿದ್ದ ಲಿಂಗಾಯತ ಧರ್ಮದ 867 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಬಸವ ಸಂಸತ್ತಿಗೆ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಬಸವಾದಿ ಶರಣರು ರಚಿಸಿ ಕೊಟ್ಟಿರುವ ವಚನಗಳು ಕೇವಲ ಆಧ್ಯಾತ್ಮದ ಸಂದೇಶಗಳಲ್ಲ. ಅವು ಸುಭದ್ರ ಬದುಕನ್ನು ಕಟ್ಟಿಕೊಡುವ ಜೀವನದ ಸೂತ್ರಗಳು. ಪ್ರತಿಯೊಬ್ಬರು ವಚನಗಳ ಅಧ್ಯಯನ ಹಾಗೂ ಅವಲೋಕನ ಮಾಡಿಕೊಳ್ಳುವ ಮೂಲಕ ಸತ್ಯ ಮತ್ತು ಸತ್ವ ಭರಿತ ಜೀವನ ರೂಪಿಸಿಕೊಳ್ಳಬೇಕು. ಬಸವ ಪರಿಣಿತ ಸಮಾಜವನ್ನು ಕಟ್ಟಬೇಕು ಎಂದರು. ಶೋಷಿತ ಸಮುದಾಯಗಳು, ಮಹಿಳೆಯರನ್ನು ಒಂದು ಗೂಡಿಸಿ ಬಸವಣ್ಣನವರು ಸ್ಥಾಪಿಸಿರುವ ಲಿಂಗಾಯತ ಧರ್ಮ ಮತ್ತು ಕಟ್ಟಿದ್ದ ಅನುಭವ ಮಂಟಪವು ಆಧುನಿಕ ಜಗತ್ತಿಗೂ ವಿಸ್ಮಯ ಮೂಡಿಸುತ್ತಿದೆ. 900 ವರ್ಷಗಳ ಹಿಂದೆ ಸ್ಥಾಪಿತವಾದ ಲಿಂಗಾಯತ ಧರ್ಮವೂ ಹತ್ತು ಹಲವು ದಾಳಿಗಳ ನಂತರವೂ ಸಶಕ್ತ ಧರ್ಮವಾಗಿ ಎದ್ದು ನಿಂತಿರುವದು ಲಿಂಗಾಯತ ಧರ್ಮದ ಸತ್ವ ಮತ್ತು ಶಕ್ತಿನೇ ಕಾರಣವಾಗಿದೆ. ಅಪ್ಪಟ ಬಸವಾಭಿಮಾನಿಗಳು ಬಸವ ಸಂಸತ್ತಿಗೆ ಸದಸ್ಯರಾಗುವ ಮೂಲಕ ಬಸವ ಸಂಸತ್ತಿನ ಕನಸು ನನಸಾಗಿಸಬೇಕು ಎಂದರು.

ವಚನ ಪ್ರಚಾರ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಜಕಾತಿ ಮಾತನಾಡಿ, ದೇಶÀದ ಹಾಗೂ ಜಗತ್ತಿನ ಇತರ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿ ಹದಗೆಡಲು ಆಯಾ ಸರಕಾರಗಳ ತಪ್ಪು ಆರ್ಥಿಕ ನೀತಿಗಳೇ ಕಾರಣ. ಬಸವಾದಿ ಶರಣರು ತೋರಿಸಿ ಕೊಟ್ಟಿರುವ ಕಾಯಕ ಮತ್ತು ದಾಸೋಹದ ಸೂತ್ರದ ಪಾಲನೆಯಿಂದ ಮಾತ್ರ ಇಡಿ ಜಗತ್ತು ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯ ಎಂದರು.
ಬಸವ ಭೀಮ ಸೇನೆಯ ಹಾಗೂ ಬಸವ ಸಂಸತ್ತಿನ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಬಾಹ್ಯ ವಿರೋಧಿಗಳಿಗಿಂತ ಆಂತರಿಕ ವಿರೋಧಿಗಳೇ ಹೆಚ್ಚಾಗಿದ್ದಾರೆ. ಬಸವಾದಿ ಶರಣರ ಪ್ರತಿಬಿಂಬಗಳಾಗಿ ಕಂಗೋಳಿಸುವ ಮೂಲಕ ಧರ್ಮವನ್ನು ಕಟ್ಟಬೇಕಾಗಿದ್ದ ಲಿಂಗಾಯತ ಮಠಾಧೀಶರುಗಳು, ದಿನಕೊಬ್ಬರಂತೆ ಬಸವ ವಿರೋಧಿಗಳಿಗೆ, ಮನುವಾದಿಗಳಿಗೆ ಎಗ್ಗಿಲ್ಲದೆ ಶರಣಾಗುತ್ತಿರುವದರಿಂದ 12 ನೇ ಶತಮಾನದಂತೆ ಈ 21 ನೇ ಶತಮಾನದಲ್ಲಿಯೂ ಸಾಮಾನ್ಯ ಜನರೇ ಮೈಗೊಡವಿ ಎದ್ದು ನಿಲ್ಲುವ ಮೂಲಕ ಲಿಂಗಾಯತ ಧರ್ಮವನ್ನು ವಿಶ್ವ ಧರ್ಮವಾಗಿಸಬೇಕಾಗಿದೆ. ಧರ್ಮ ಮಾನ್ಯತೆಯ ಹೋರಾಟ ಮತ್ತೆ ಆರಂಭಿಸಬೇಕಾಗಿದ್ದ. ಧರ್ಮದ ಹೋರಾಟಕ್ಕಾಗಿ ಜನ ಕ್ರಾಂತಿಗೆ ನಾಂದಿ ಹಾಡಬೇಕು ಎಂದರು.

ಮಹಾಂತೇಶ ತೋರಣಗಟ್ಟಿ, ಸಿದ್ರಾಮ ಸಾವಳಗಿ, ಯಲ್ಲಪ್ಪ ಹುದಲಿ, ರಾಜಶೇಖರ ಭೋಜ, ರವಿ ಪಾಟೀಲ, ವಿಠ್ಠಲ ಬಾಗೋಡಿ, ಆಕಾಶ ಹಲಗೇಕರ, ನೀಮಾ ಜಕಾತಿ, ರಾಜಶ್ರೀ ದಯನ್ನವರ ಮುಂತಾದವರು ಉಪಸ್ಥಿತರಿದ್ದರು.

Tags:

error: Content is protected !!