Belagavi

ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣಿರಿ: ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಕರೆ

Share

ಬೆಳಗಾವಿ: ದೀನ ದುರ್ಬಲರ ಸೇವೆ ಪರಮಾತ್ಮನ ಸೇವೆ, ಸಮಾಜದಲ್ಲಿರುವ ಬಡ, ನಿರ್ಗತಿಕರ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕು ಎಂದು ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ತಿಳಿಸಿದರು.

ನಗರದ ದೇವರಾಜ ಅರಸ ಬಡಾವಣೆಯ ಶ್ರೀಮತಿ ಚಿನ್ನಮ್ಮ ಹಿರೇಮಠ ವೃದ್ಧಾಶ್ರಮದ ಸಭಾಂಗಣದಲ್ಲಿ ಬೈಲಹೊಂಗಲದ ಡಾ:ರಾಮಣ್ಣವರ ಚಾರಿಟೆಬಲ್ ಟ್ರಸ್ಟ್ ಹಾಗೂ ಮಹಾಂತ ಟ್ರೇಡರ್ಸ್ ಜಂಟಿಯಾಗಿ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ವೈದ್ಯಕೀಯ ಪ್ರವೇಶ ಪಡೆದ ವೈದ್ಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸನ್ಮಾನ ಹಾಗೂ ಪುಸ್ತಕ ವಿತರಣಾಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ವೈದ್ಯ ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ಉತ್ತಮ ಅಭ್ಯಾಸ ರೂಢಿಸಿಕೊಂಡು ಮುಂಬರುವ ದಿನಗಳಲ್ಲಿ ಯಶಸ್ವಿ ವೈದ್ಯರಾಗಿ ಸಮಾಜಮುಖಿ ಚಟುಚಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು. ಕಾರ್ಯಾಕ್ರಮದಲ್ಲಿ ಕಾರಂಜಿಮಠದ ಶ್ರೀ ಶಿವಯೋಗಿ ದೇವರು ಮಹಾಂತ ಟ್ರೇಡರ್ಸ್‍ನ ಮಾಲೀಕರಾದ ಮಹಾಂತೇಶ ಶೀಲವಂತರ, ಡಾ:ರಾಮಣ್ಣವರ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಸುಶೀಲಾದೇವಿ ರಾಮಣ್ಣವರ, ಮಹೇಶ ಕೋಟಗಿ, ಬಸಪ್ಪ ಮೋಕಾಶಿ ಸಿಬಿಎಸ್ ಪಬ್ಲಿಕೇಶನ್ ಸುಜೀತ ಮರಬದ ಉಪಸ್ಥಿತರಿದ್ದು ನೀಟ್ ಪರೀಕ್ಷೆಯಲ್ಲಿ ಯಶಸ್ಸುಗಳಿಸಿ ವೈದ್ಯಕೀಯ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು

ಇನ್ನೊರ್ವ ಅತಿಥಿ ಎಂ.ಎಸ್.ಚೌಗಲಾ ಮಾತನಾಡಿ ವೈದ್ಯರಾದವರು ಸಾಕಷ್ಟು ಜನರ ಸೇವೆ ಮಾಡುವ ವಿಫುಲ ಅವಕಾಶ ಹೊಂದಿರುತ್ತಾರೆ. ವಿದ್ಯಾರ್ಥಿ ದೆಸೆಯಿಂದಲೇ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಲ್ಲಿ ಎನ್ನುವ ದೃಷ್ಟಿಯಿಂದ ಬೈಲಹೊಂಗಲದ ಡಾ:ರಾಮಣ್ಣವರ ಚಾರಿಟೆಬಲ್ ಟ್ರಸ್ಟ್ ವೃದ್ಧಾಶ್ರಮದ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಿರುವದು ಅಭಿನಂದನಾರ್ಹ ಎಂದರು.

ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಕಾರ್ಯದರ್ಶಿ ಹಾಗೂ ಕೆಎಲ್‍ಇ ಶ್ರೀ ಬಿ.ಎಮ್.ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗದ ಪ್ರಾದ್ಯಾಪಕ ಹಾಗೂ ಮುಖ್ಯಸ್ಥ, ದೇಹದಾನ ಜಾಗೃತಿಗಾಗಿ ಹೆತ್ತ ತಂದೆ ಮೃತದೇಹ ಛೇದಿಸಿ ವೈದ್ಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ ವೈದ್ಯಕೀಯ ಇತಿಹಾಸ ನಿರ್ಮಿಸಿದ ಡಾ ಮಹಾಂತೇಶ ರಾಮಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿ ದೇಹದಾನಕ್ಕೆ ಡಾ:ರಾಮಣ್ಣವರ ಚಾರಿಟೆಬಲ್ ಟ್ರಸ್ಟ್ ಕೈಗೊಂಡ ಚಟುವಟಿಕೆಗಳನ್ನು ಪರಿಚಯಿಸಿ, ಹಿರಿಯ ಜೀವಗಳ ಆಶೀರ್ವಾದದಿಂದ ವೈದ್ಯಕೀಯ ಶಿಕ್ಷಣ ಪ್ರಾರಂಭವಾಗಲಿ, ವಿದ್ಯಾರ್ಥಿಗಳಿಗೆ ಕೊಟ್ಟ ಶರೀರರಚನಾ ಪುಸ್ತಕಗಳು ಅವರ ಜ್ಞಾನವೃದ್ಧಿಗೆ ಸಹಕಾರಿಯಾಗಲಿ ಎಂದರು. ಜಯಶ್ರೀ ಬಂಡಿವಡ್ಡರ ಪ್ರಾರ್ಥಿಸಿದರು. ಎಂ.ಎಂ.ಗಡಗಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Tags:

error: Content is protected !!