ಕಳೆದ ಎರಡು ದಿನಗಳ ಹಿಂದೆ ಉತ್ತರಪ್ರದೇಶದ ಬಾದ್ವಾನಾಜ್ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಖಂಡಿಸಿ ಬೆಳಗಾವಿಯಲ್ಲಿ ಸಿಐಟಿಯು ಸಂಘಟನೆ ವತಿಯಿಂದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಶುಕ್ರವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಸಿಐಟಿಯು ಸಂಘಟನೆ ಪದಾಧಿಕಾರಿಗಳು ಅಂಗನವಾಡಿ ಖಾಸಗೀಕರಣ, ಅಕ್ಷರ ದಾಸೋಹ ಖಾಸಗೀಕರಣ ಸೇರಿದಂತೆ ಇನ್ನು ಹಲವು ಸರ್ಕಾರದ ನಿರ್ಧಾರಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಸಿಐಟಿಯು ಮುಖಂಡ ಜಿ.ವ್ಹಿ.ಕುಲಕರ್ಣಿ ಮಾತನಾಡಿ ಉತ್ತರಪ್ರದೇಶದ ಬಾದ್ವಾನಾಜ್ ಜಿಲ್ಲೆಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ಇದೇ ರೀತಿ ಘಟನೆ ನಡೆದಿತ್ತು. ಆ ಘಟನೆಯಿಂದ ಯೋಗಿ ಆದಿತ್ಯಾನಾಥ ಸರ್ಕಾರ ಇನ್ನು ಪಾಠ ಕಲಿತಿಲ್ಲ. ನಿದ್ದೆಯಿಂದ ಇನ್ನು ಎದ್ದಿಲ್ಲ. ಮಹಿಳೆಯರಿಗೆ ರಕ್ಷಣೆ ಕೊಡಬೇಕು ಎಂದು ಜೆಎಸ್ ವರ್ಮಾ ರಿಪೋರ್ಟ್ ಬಂದಿದೆ. ಆದ್ರೆ ಆ ವರದಿ ಧೂಳು ತಿನ್ನುತ್ತಿದೆ. ಹೀಗಾಗಿ ದೇಶದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ಅದೇ ರೀತಿ ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳು ಸೇರಿದಂತೆ ಇನ್ನಿತರ ಕಾರ್ಮಿಕ ವಿರೋಧಿ ನೀತಿಗಳನ್ನು ತಕ್ಷಣವೇ ರದ್ಧುಪಡಿಸಬೇಕು ಎಂದು ಒತ್ತಾಯಿಸಿದರು.
ನಂತರ ಮಂದಾ ನೇವಗಿ ಮಾತನಾಡಿ ಅಂಗನವಾಡಿ ಕಾರ್ಯಕರ್ತೆ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಪಾಪಿಗಳಿಗೆ ಗಲ್ಲು ಶಿಕ್ಷೆ ಘೋಷಿಸಬೇಕು. ಇನ್ನೊಮ್ಮೆ ಯಾರೂ ಕೂಡ ಈ ರೀತಿ ತಪ್ಪು ಮಾಡದಂತೆ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೃಷ್ಣಾತಾಯಿ ಬಿಮಾನಾಚೆ ಸೇರಿದಂತೆ ಸಿಐಟಿಯು ಸಂಘಟನೆ ಹಲವು ಪದಾಧಿಕಾರಿಗಳು ಭಾಗಿಯಾಗಿದ್ದರು.